ADVERTISEMENT

ಕೈಗಾರಿಕಾ ಬೆಳವಣಿಗೆಗೆ ಸಂಘಟನೆಗಳು ಮಾರಕ: ಸಿಜೆಐ ಅಭಿಪ್ರಾಯಕ್ಕೆ ಖಂಡನೆ

ಪಿಟಿಐ
Published 31 ಜನವರಿ 2026, 15:36 IST
Last Updated 31 ಜನವರಿ 2026, 15:36 IST
<div class="paragraphs"><p>ಸೂರ್ಯ ಕಾಂತ್</p></div>

ಸೂರ್ಯ ಕಾಂತ್

   

ನವದೆಹಲಿ: ಮನೆಗೆಲಸದವರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಈ ವೇಳೆ, ‘ಕಾರ್ಮಿಕರು ಸಂಘಟನೆಗಳನ್ನು ರಚಿಸಿಕೊಂಡಿರುವುದು ಮತ್ತು ಅವುಗಳ ಕಾರ್ಯವಿಧಾನವೇ ದೇಶದ ಕೈಗಾರಿಕಾ ಬೆಳವಣಿಗೆಗೆ ಕುತ್ತಾಗಿದೆ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ನೀಡಿದ ಅಭಿಪ್ರಾಯವನ್ನು ದೇಶದ ಕಾರ್ಮಿಕ ಸಂಘಟನೆಗಳು ಖಂಡಿಸಿವೆ.

ಅರ್ಜಿ ವಜಾ ಮಾಡಿದ್ದನ್ನು ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್‌, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲುಎ, ಎಐಸಿಸಿಟಿಯು, ಎಲ್‌ಪಿಎಲ್‌ ಮತ್ತು ಯುಟಿಯುಸಿ ಸಂಘಟನೆಗಳು ವಿರೋಧಿಸಿವೆ. ‘ಸಿಜೆಐ ಸೂರ್ಯ ಕಾಂತ್‌ ಅವರು ತಮ್ಮ ಹೇಳಿಕೆಯನ್ನು ವಾಪಸು ಪಡೆಯಬೇಕು’ ಎಂದೂ ಈ ಸಂಘಟನೆಗಳು ಒತ್ತಾಯಿಸಿವೆ.

ADVERTISEMENT

ಈ ಬಗ್ಗೆ ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಗಳು, ‘ನ್ಯಾಯದಾನದ ವೇಳೆ ಅಭಿಪ್ರಾಯ ವ್ಯಕ್ತಪಡಿಸುವಾಗ ‘ವರ್ಗ ತಾರತಮ್ಯ’ದ ಮನಃಸ್ಥಿತಿ ಇರುವುದು ಇದರಿಂದ ತಿಳಿಯುತ್ತದೆ. ಸಾಂವಿಧಾನಿಕವಾಗಿ ಇರುವ ಕಲ್ಯಾಣ ರಾಜ್ಯ ಪರಿಕಲ್ಪನೆಯನ್ನು ಈ ಅಭಿಪ್ರಾಯವು ಕಡೆಗಣಿಸಿದೆ. ಸಂವಿಧಾನ ನೀಡಿರುವ ಸಾಮಾಜಿಕ ನ್ಯಾಯ, ಸಮಾನತೆ, ಕಾರ್ಮಿಕರಿಗೆ ಘನತೆಯ ಬದುಕು ಇರಬೇಕು ಎನ್ನುವುದಕ್ಕೆ ಇದು ತದ್ವಿದ್ಧವಾಗಿದೆ’ ಎಂದಿವೆ.

‘ಕಾರ್ಮಿಕರ ಹಕ್ಕುಗಳನ್ನು ಮತ್ತು ಕಾರ್ಮಿಕರ ಸಂಘರ್ಷವನ್ನು ನಿರಾಕರಿಸುವ ಲಾಗಾಯಿತಿನ ಸಂಕಥನಕ್ಕೆ ಇಂಥ ಅಭಿಪ್ರಾಯವು ಮುದ್ರೆ ಒತ್ತಿದಂತಾಗಿದೆ. ಆರ್ಥಿಕ ಅಭಿವೃದ್ಧಿಗೆ ಕಾರ್ಮಿಕ ಸಂಘಟನೆಗಳು ಯಾವತ್ತಿಗೂ ಮಾರಕ ಅಥವಾ ತೊಡಕಾಗಿಲ್ಲ. ಇವುಗಳು ಪ್ರಜಾಸತ್ತಾತ್ಮಕವಾದ ಸಂಸ್ಥೆಗಳು. ಕಾರ್ಮಿಕರ ಉತ್ತಮ ಜೀವನಕ್ಕೆ, ಅವರ ಘನತೆಯ ಬದುಕಿಗೆ ಮತ್ತು ಅವರ ಹಕ್ಕುಗಳನ್ನು ರಕ್ಷಿಸುವುದಕ್ಕೆ ಇರುವ ಸಂಸ್ಥಗಳಿವು’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.