ನವದೆಹಲಿ: ನಿವಾಸದಲ್ಲಿ ನಗದು ಪತ್ತೆಯಾದ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ಆಂತರಿಕ ವಿಚಾರಣಾ ಸಮಿತಿ ನೀಡಿರುವ ವರದಿಯನ್ನು ಅಮಾನ್ಯ ಮಾಡುವಂತೆ ಕೋರಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಸಲ್ಲಿಸಿದ್ದ ಮೇಲ್ಮನವಿಯನ್ಜು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
‘ನ್ಯಾಯಮೂರ್ತಿ ವರ್ಮಾ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಅಂತರಿಕ ವಿಚಾರಣಾ ಸಮಿತಿಯು ಬಹಳ ಸೂಕ್ಷ್ಮವಾಗಿ ಗಮನಿಸಿ, ವರದಿ ನೀಡಿದೆ. ಈ ಹಿಂದಿನ ಸಿಜೆಐ ಖನ್ನಾ ಕೂಡ ಬಹಳ ಎಚ್ಚರಿಕೆಯಿಂದ ಪ್ರಕ್ರಿಯೆ ಅನುಸರಿಸಿದ್ದಾರೆ’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
‘ನ್ಯಾಯಮೂರ್ತಿ ವರ್ಮಾ ಅವರ ವರ್ತನೆ ವಿಶ್ವಾಸ ಮೂಡಿಸುವುದಿಲ್ಲ. ಹೀಗಾಗಿ, ಅವರ ಮೇಲ್ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳಾದ ದೀಪಾಂಕರ ದತ್ತ ಹಾಗೂ ಎ.ಜಿ.ಮಸೀಹ್ ಅವರು ಇದ್ದ ನ್ಯಾಯಪೀಠ ಹೇಳಿದೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಸಂದರ್ಭದಲ್ಲಿ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ನಗದು ಪತ್ತೆಯಾದ ಆರೋಪ ಕೇಳಿಬಂದಿತ್ತು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ವಿಚಾರಣಾ ಸಮಿತಿಯು 10 ದಿನ ವಿಚಾರಣೆ ನಡೆಸಿತ್ತು. 55 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ 64 ಪುಟಗಳ ಈ ವರದಿಯನ್ನು ಸಿದ್ಧಪಡಿಸಿತ್ತು.
ಈಗ, ಈ ವರದಿಯನ್ನು ಅನೂರ್ಜಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು ನ್ಯಾಯಮೂರ್ತಿ ವರ್ಮಾ ಅವರಿಗಾದ ದೊಡ್ಡ ಹಿನ್ನಡೆಯಾಗಿದೆ.
‘ನ್ಯಾಯಮೂರ್ತಿ ವರ್ಮಾ ನಿವಾಸದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ನಡೆಸಿದ ಬೆಂಕಿ ನಂದಿಸುವ ಕಾರ್ಯಾಚರಣೆಯ ಚಿತ್ರಗಳು ಹಾಗೂ ವಿಡಿಯೊಗಳನ್ನು, ಸಮಿತಿ ಹಾಗೂ ಈ ಹಿಂದಿನ ಸಿಜೆಐ ಖನ್ನಾ ಅವರು ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಹಾಕಿಲ್ಲ. ನಿಯಮಗಳ ಪ್ರಕಾರ, ಇಂತಹ ಕ್ರಮ ಅಗತ್ಯವಿರಲಿಲ್ಲ ಎಂಬುದು ನಮ್ಮ ಅನಿಸಿಕೆ. ಇದನ್ನು ಹೊರತುಪಡಿಸಿ ಎಲ್ಲ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ’ ಎಂದು ತೀರ್ಪು ಓದಿದ ನ್ಯಾಯಮೂರ್ತಿ ದತ್ತ ಹೇಳಿದರು.
‘ಈ ವಿಚಾರದಲ್ಲಿ ನ್ಯಾಯಮೂರ್ತಿ ವರ್ಮಾ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗಿಲ್ಲ’ ಎಂದ ನ್ಯಾಯಪೀಠ, ‘ಯಾವುದೇ ತಕರಾರುಗಳು ಇದ್ದಲ್ಲಿ, ತಮ್ಮ ವಿರುದ್ಧ ನಡೆಯುವ ವಾಗ್ದಂಡನೆ ಪ್ರಕ್ರಿಯೆ ವೇಳೆ ಪ್ರಸ್ತಾಪಿಸಲು ನ್ಯಾಯಮೂರ್ತಿ ವರ್ಮಾ ಸ್ವತಂತ್ರರು’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.