ADVERTISEMENT

ಸಿಜೆಐ ಅಭಿಮತಕ್ಕೆ ಕಾರ್ಮಿಕ ಸಂಘಟನೆಗಳ ಖಂಡನೆ

ಕೈಗಾರಿಕಾ ಬೆಳವಣಿಗೆಗೆ ಸಂಘಟನೆಗಳು ಮಾರಕ ಎಂದಿದ್ದ ನ್ಯಾ. ಸೂರ್ಯ ಕಾಂತ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 22:00 IST
Last Updated 31 ಜನವರಿ 2026, 22:00 IST
   

ನವದೆಹಲಿ: ಮನೆಗೆಲಸದವರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಈ ವೇಳೆ, ‘ಕಾರ್ಮಿಕರು ಸಂಘಟನೆಗಳನ್ನು ರಚಿಸಿಕೊಂಡಿರುವುದು ಮತ್ತು ಅವುಗಳ ಕಾರ್ಯವಿಧಾನವೇ ದೇಶದ ಕೈಗಾರಿಕಾ ಬೆಳವಣಿಗೆಗೆ ಕುತ್ತಾಗಿದೆ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ನೀಡಿದ ಅಭಿಪ್ರಾಯವನ್ನು ದೇಶದ ಕಾರ್ಮಿಕ ಸಂಘಟನೆಗಳು ಖಂಡಿಸಿವೆ.

ಅರ್ಜಿ ವಜಾ ಮಾಡಿದ್ದನ್ನು ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್‌, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲುಎ, ಎಐಸಿಸಿಟಿಯು, ಎಲ್‌ಪಿಎಲ್‌ ಮತ್ತು ಯುಟಿಯುಸಿ ಸಂಘಟನೆಗಳು ವಿರೋಧಿಸಿವೆ. ‘ಸಿಜೆಐ ಸೂರ್ಯ ಕಾಂತ್‌ ಅವರು ತಮ್ಮ ಹೇಳಿಕೆಯನ್ನು ವಾಪಸು ಪಡೆಯಬೇಕು’ ಎಂದೂ ಈ ಸಂಘಟನೆಗಳು ಒತ್ತಾಯಿಸಿವೆ.

ಈ ಬಗ್ಗೆ ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಗಳು, ‘ನ್ಯಾಯದಾನದ ವೇಳೆ ಅಭಿಪ್ರಾಯ ವ್ಯಕ್ತಪಡಿಸುವಾಗ ‘ವರ್ಗ ತಾರತಮ್ಯ’ದ ಮನಃಸ್ಥಿತಿ ಇರುವುದು ಇದರಿಂದ ತಿಳಿಯುತ್ತದೆ. ಸಾಂವಿಧಾನಿಕವಾಗಿ ಇರುವ ಕಲ್ಯಾಣ ರಾಜ್ಯ ಪರಿಕಲ್ಪನೆಯನ್ನು ಈ ಅಭಿಪ್ರಾಯವು ಕಡೆಗಣಿಸಿದೆ. ಸಂವಿಧಾನ ನೀಡಿರುವ ಸಾಮಾಜಿಕ ನ್ಯಾಯ, ಸಮಾನತೆ, ಕಾರ್ಮಿಕರಿಗೆ ಘನತೆಯ ಬದುಕು ಇರಬೇಕು ಎನ್ನುವುದಕ್ಕೆ ಇದು ತದ್ವಿರುದ್ಧವಾಗಿದೆ’ ಎಂದಿವೆ.

ADVERTISEMENT

‘ಕಾರ್ಮಿಕರ ಹಕ್ಕುಗಳನ್ನು ಮತ್ತು ಕಾರ್ಮಿಕರ ಸಂಘರ್ಷವನ್ನು ನಿರಾಕರಿಸುವ ಲಾಗಾಯಿತಿನ ಸಂಕಥನಕ್ಕೆ ಇಂಥ ಅಭಿಪ್ರಾಯವು ಮುದ್ರೆ ಒತ್ತಿದಂತಾಗಿದೆ. ಆರ್ಥಿಕ ಅಭಿವೃದ್ಧಿಗೆ ಕಾರ್ಮಿಕ ಸಂಘಟನೆಗಳು ಯಾವತ್ತಿಗೂ ಮಾರಕ ಅಥವಾ ತೊಡಕಾಗಿಲ್ಲ. ಇವುಗಳು ಪ್ರಜಾಸತ್ತಾತ್ಮಕವಾದ ಸಂಸ್ಥೆಗಳು. ಕಾರ್ಮಿಕರ ಉತ್ತಮ ಜೀವನಕ್ಕೆ, ಅವರ ಘನತೆಯ ಬದುಕಿಗೆ ಮತ್ತು ಅವರ ಹಕ್ಕುಗಳನ್ನು ರಕ್ಷಿಸುವುದಕ್ಕೆ ಇರುವ ಸಂಸ್ಥಗಳಿವು’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಸಂಘಟನೆಗಳು ಹೇಳಿದ್ದೇನು?

  • ಮನೆಗೆಲಸದವರಿಗೆ ಸರಿಯಾಗಿ ವೇತನ ನೀಡುವುದಿಲ್ಲ, ಬಹಳ ಹೊತ್ತು ಅವರಿಂದ ಕೆಲಸ ಮಾಡಿಸಿಕೊಳ್ಳಲಾಗುತ್ತದೆ, ಯಾವಾಗ ಬೇಕಾದರೂ ಅವರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ. ಜೊತೆಗೆ, ಅವರ ಕುರಿತು ತೀರಾ ಕೀಳಾಗಿ ಮಾತನಾಡಲಾಗುತ್ತದೆ, ಮಾತಿನ ಮೂಲಕವೇ ಹಿಂಸಿಸಲಾಗುತ್ತದೆ. ಈ ಯಾವುದನ್ನೂ ತಡೆಯಲು ಸೂಕ್ತ ಕಾನೂನುಗಳಿಲ್ಲ

  • ಕಾರ್ಮಿಕರ ಹಕ್ಕುಗಳ ಮೇಲೆ ಕೇಂದ್ರ ಸರ್ಕಾರವು ದಾಳಿ ನಡೆಸುತ್ತಿದೆ. ಉದ್ಯಮ ಸ್ನೇಹಿಯಾಗಿರುವ ಕಾರ್ಮಿಕ ಸಂಹಿತೆಗಳು, ಶ್ರಮ ಶಕ್ತಿ ನೀತಿ ಸೇರಿದಂತೆ ಹಲವು ಕಾನೂನುಗಳ ಮೂಲಕ ಸರ್ಕಾರ ಕಾರ್ಮಿಕರನ್ನು ಹಿಂಸಿಸುತ್ತಿದೆ. ನರೇಗಾವನ್ನು ದುರ್ಬಲಗೊಳಿಸಲಾಗಿದೆ. ಕೇಂದ್ರ ಸರ್ಕಾರವು ವಿದ್ಯುತ್‌ ತಿದ್ದುಪಡಿ ಕಾಯ್ದೆ 2025 ಮತ್ತು ಬೀಜ ಮಸೂದೆಗಳನ್ನು ಮುಂದಿಡುತ್ತಿರುವ ಈ ಹೊತ್ತಿನಲ್ಲಿ ನ್ಯಾಯಾಲಯಗಳು ನೀಡುವ ಅಭಿಪ್ರಾಯಗಳು ಪ್ರಮುಖ ಪಾತ್ರವಹಿಸುತ್ತವೆ. ತಪ್ಪು ಸಂದೇಶ ನೀಡುತ್ತವೆ

ಮನೆಗಳು ಯುದ್ಧಭೂಮಿ ಆಗುತ್ತವೆ: ಸಿಜೆಐ

ದೇಶದಲ್ಲಿ ಎಷ್ಟೊಂದು ಕಾರ್ಖಾನೆಗಳು ಮುಚ್ಚಿವೆ. ಇದಕ್ಕೆ ಕಾರ್ಮಿಕ ಸಂಘಟನೆಗಳಿಗೆ ಧನ್ಯವಾದ ಹೇಳಲೇಬೇಕು. ನಿಜಾಂಶ ತಿಳಿದುಕೊಳ್ಳೋಣ. ದೇಶದ ಎಲ್ಲ ಸಾಂಪ್ರದಾಯಿಕ ಕಾರ್ಖಾನೆಗಳು ಇಂಥ ‘ಬಾವುಟ’ ಸಂಘಟನೆಗಳಿಂದ ಮುಚ್ಚಿವೆ. ಅವರಿಗೆ ಕೆಲಸ ಮಾಡಲು ಇಷ್ಟವಿಲ್ಲ. ಇಂಥ ಸಂಘಟನೆಗಳ ನಾಯಕರೇ ದೇಶದ ಕೈಗಾರಿಕಾ ಬೆಳವಣಿಗೆಯನ್ನು ತಡೆಯುತ್ತಿದ್ದಾರೆ. ಮನೆಗೆಲಸದವರಿಗೆ ಕನಿಷ್ಠ ವೇತನ ನಿಗದಿ ಮಾಡಿದರೆ, ಜನರು ಮನೆಗೆಲಸದವರನ್ನು ನೇಮಕ ಮಾಡಿಕೊಳ್ಳುವುದಕ್ಕೇ ನಿರಾಕರಿಸುತ್ತಾರೆ. ಎಲ್ಲ ಮನೆಗಳು ಯುದ್ಧಭೂಮಿಯಾಗುತ್ತವೆ. ಕನಿಷ್ಠ ವೇತನ ನಿಗದಿ ಮಾಡಿದರೆ, ಈ ಸಂಘಟನೆಗಳು ಎಲ್ಲ ಮನೆಯವರನ್ನು ನ್ಯಾಯಾಲಯಕ್ಕೆ ಎಳೆದು ತರುತ್ತಾರೆ.

 – ಸೂರ್ಯ ಕಾಂತ್‌, ಭಾರತದ ಮುಖ್ಯ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.