ADVERTISEMENT

ಗಂಭೀರ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಿ: ಸುಪ್ರೀಂ ಕೋರ್ಟ್ ಸೂಚನೆ

ಮಧ್ಯಂತರ ಆದೇಶಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗಳಿಗೆ ‘ಸುಪ್ರೀಂ’ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 16:02 IST
Last Updated 11 ಜನವರಿ 2026, 16:02 IST
.
.   

ನವದೆಹಲಿ: ಕೊಲೆ, ವರದಕ್ಷಿಣೆ ಸಾವು, ಅತ್ಯಾಚಾರ ಸೇರಿದಂತೆ ಇನ್ನಿತರೆ ಸೂಕ್ಷ್ಮ ಮತ್ತು ಗಂಭೀರ ವಿಷಯಗಳ ವಿಚಾರಣೆಯನ್ನು ತಡೆಹಿಡಿಯುವ ಮಧ್ಯಂತರ ಆದೇಶಗಳ ಜಾರಿಗೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಎಲ್ಲ ಹೈಕೋರ್ಟ್‌ಗಳ ಮುಖ್ಯನ್ಯಾಯಮೂರ್ತಿಗಳಿಗೆ ಸೂಚಿಸಿದೆ.

ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ದೋಷಾರೋಪ ಸಲ್ಲಿಸುವುದರ ವಿರುದ್ಧ ಆರೋಪಿ ಮತ್ತು ಅವರ ಕುಟುಂಬ ಸದಸ್ಯರು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಲು ರಾಜಸ್ಥಾನ ಹೈಕೋರ್ಟ್ 23 ವರ್ಷ ತೆಗೆದುಕೊಂಡಿರುವುದು ‘ಮನಸ್ಸನ್ನು ಕಲಕಿದ ಮತ್ತು ತುಂಬಾ ನೋವಿನ ವಿಷಯ’ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಅಭಿಪ್ರಾಯಪಟ್ಟಿದೆ.

ರಾಜಸ್ಥಾನ ಹೈಕೋರ್ಟ್‌ 2003ರಲ್ಲಿ ಕ್ರಿಮಿನಲ್‌ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದೀಗ ಆ ಅರ್ಜಿಯನ್ನು ತಿರಸ್ಕರಿಸಿದೆ.

ಹೈಕೋರ್ಟ್‌ ಆದೇಶದ ವಿರುದ್ಧ ಮೃತ ಮಹಿಳೆಯ ಪತಿ ವಿಜಯ್‌ಕುಮಾರ್ ಮತ್ತು ಇತರರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠವು, ‘ಹೈಕೋರ್ಟ್‌ಗಳು ನೀಡಿದ ಮಧ್ಯಂತರ ಆದೇಶದ ಬಲದ ಮೇಲೆ ಇಂತಹ ಗಂಭೀರ ಅಪರಾಧಗಳ ಕ್ರಿಮಿನಲ್ ವಿಚಾರಣೆಗಳು ವರ್ಷಗಳ ಅವಧಿ ಬಾಕಿ ಉಳಿದಿದ್ದರೆ, ಅದು ನ್ಯಾಯದ ಅಪಹಾಸ್ಯವಲ್ಲದೇ ಮತ್ತೇನಲ್ಲ’ ಎಂದಿದೆ.

‘ನ್ಯಾಯಾಲಯವು ಎಲ್ಲರನ್ನೂ ಪರಿಗಣಿಸಿ ನ್ಯಾಯ ಮಾಡಬೇಕು. ಆರೋಪಿಗಳ ಜೊತೆ ಮಾತ್ರ ನ್ಯಾಯ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಎತ್ತಿರುವ ನ್ಯಾಯಪೀಠವು, ವಿವರವಾದ ವರದಿ ಸಲ್ಲಿಸುವಂತೆ ರಾಜಸ್ಥಾನ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ಗೆ ಸೂಚಿಸಿದ್ದು, ಜ. 15ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.