ADVERTISEMENT

ನೀಟ್‌–‍ಪಿಜಿ ಕೀ–ಉತ್ತರ: ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

‘ನೀಟ್‌–‍ಪಿಜಿ’ ಕೀ–ಉತ್ತರ ಬಹಿರಂಗಕ್ಕೆ ನಕಾರ ಪ್ರಶ್ನಿಸಿ ಅರ್ಜಿ

ಪಿಟಿಐ
Published 27 ಜನವರಿ 2026, 15:52 IST
Last Updated 27 ಜನವರಿ 2026, 15:52 IST
<div class="paragraphs"><p>ಸುಪ್ರೀಂ ಕೋರ್ಟ್‌ </p></div>

ಸುಪ್ರೀಂ ಕೋರ್ಟ್‌

   

ನವದೆಹಲಿ(ಪಿಟಿಐ): ‘ನೀಟ್‌–ಪಿಜಿ 2025’ರ ಪ್ರಶ್ನೆಪತ್ರಿಕೆಗಳು ಹಾಗೂ ಕೀ–ಉತ್ತರಗಳನ್ನು ಬಹಿರಂಗಪಡಿಸದಿರುವ ರಾಷ್ಟ್ರೀಯ ಪರೀಕ್ಷೆಗಳ ಮಂಡಳಿ(ಎನ್‌ಬಿಇ) ನೀತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಸಮ್ಮತಿಸಿದೆ.

‘ನೀಟ್‌–ಪಿಜಿಯ ಪ್ರಶ್ನೆಪತ್ರಿಕೆಗಳು ಹಾಗೂ ಕೀ–ಉತ್ತರಗಳನ್ನು ಬಹಿರಂಗಪಡಿಸದಿರುವುದಕ್ಕೆ ಸಂಬಂಧಿಸಿದ ನೀತಿಯ ಹಿಂದಿರುವ ತರ್ಕ ಏನೆಂಬುದು ಅರ್ಥವಾಗುತ್ತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಹಾಗೂ ವಿಜಯ ಬಿಷ್ಣೋಯಿ ಅವರು ಇದ್ದ ನ್ಯಾಯಪೀಠ ಹೇಳಿತು.

ADVERTISEMENT

‘ಇಂತಹ ನಿರ್ಧಾರ ಕೈಗೊಳ್ಳುವುದಕ್ಕೆ ಸಮರ್ಥನೆ ಏನು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಈ ವಿಚಾರ ನಮಗೆ ಸಂಪೂರ್ಣವಾಗಿ ಮನವರಿಕೆ ಆಗುತ್ತಿಲ್ಲ. ಹೀಗಾಗಿ, ಈ ಅರ್ಜಿಗಳ ಕುರಿತು ಸಮಗ್ರ ವಿಚಾರಣೆ ನಡೆಸಲಾಗುವುದು’ ಎಂದೂ ಪೀಠವು ಹೇಳಿದೆ.

ಈ ಹಿಂದೆ, ಸುಪ್ರೀಂಕೋರ್ಟ್‌ಗೆ ಎನ್‌ಬಿಇ ಈ ಕುರಿತು ಪ್ರಮಾಣಪತ್ರ ಸಲ್ಲಿಸಿತ್ತು. 

‘ನೀಟ್‌–ಪಿಜಿಯ ಪ್ರಶ್ನೆಪತ್ರಿಕೆಗಳು ಹಾಗೂ ಕೀ–ಉತ್ತರಗಳು ‘ರಾಷ್ಟ್ರೀಯ ಸ್ವತ್ತು’. ಕೋಚಿಂಗ್‌ ಸೆಂಟರ್‌ಗಳಿಂದ ಈ ಸ್ವತ್ತಿನ ದುರ್ಬಳಕೆ ಮತ್ತು ಶೋಷಣೆ ತಡೆಯುವ ಉದ್ದೇಶದಿಂದ ಅವುಗಳನ್ನು ಬಹಿರಂಗಪಡಿಸುತ್ತಿಲ್ಲ’ ಎಂದು ಎನ್‌ಬಿಇ ತಿಳಿಸಿತ್ತು.

ಬೇರೆ ಬೇರೆ ಅಭ್ಯರ್ಥಿಗಳಿಗೆ ಭಿನ್ನವಾದ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿರುತ್ತದೆ. ಅಭ್ಯರ್ಥಿಗಳು ತಮಗೆ ನೀಡಲಾಗಿದ್ದ ಪ್ರಶ್ನೆಗಳಿಗೆ ಯಾವ ರೀತಿ ಉತ್ತರ ಬರೆದಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಎನ್‌ಬಿಇಯ ಈ ನೀತಿ ಅಡ್ಡಿಯಾಗುತ್ತಿದೆ ಎಂಬುದು ಅರ್ಜಿದಾರರ ವಾದವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.