ADVERTISEMENT

ಸಿವಿಲ್‌ ನ್ಯಾಯಾಧೀಶರಿಗೂ ನೇರ ನೇಮಕಾತಿಯಲ್ಲಿ ಅವಕಾಶ

2020ರ ತೀರ್ಪು ಮರುಪರಿಶೀಲನೆಗೆ ‘ಸುಪ್ರೀಂ’ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 23 ಮೇ 2021, 20:59 IST
Last Updated 23 ಮೇ 2021, 20:59 IST

ನವದೆಹಲಿ: ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನಡೆಯುವ ನೇರ ನೇಮಕಾತಿಯಲ್ಲಿ ಸ್ಪರ್ಧಿಸಲು ಸಿವಿಲ್‌ ನ್ಯಾಯಾಧೀಶರಿಗೆ ಅವಕಾಶ ಇಲ್ಲ ಎಂದು 2020ರಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ ರಾವ್‌, ವಿನೀತ್‌ ಶರಣ್‌ ಮತ್ತು ಎಸ್‌. ರವೀಂದ್ರ ಭಟ್‌ ಅವರ ಪೀಠವು ಮರುಪರಿಶೀಲನೆ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಲಿದೆ.ಕರ್ನಾಟಕದ ರಹೀಮಲಿ ಎಂ. ನದಾಫ್‌ ಮತ್ತು ಇತರರು ಹಾಗೂ ಮಧ್ಯ ಪ್ರದೇಶ, ಉತ್ತರ ಪ್ರದೇಶ ರಾಜಸ್ಥಾನದ ಕೆಲವರು ಅರ್ಜಿ ಸಲ್ಲಿಸಿದ್ದಾರೆ.

ಉನ್ನತ ನ್ಯಾಯಾಂ‌ಗ ಸೇವಾ ಪರೀಕ್ಷೆಗಳ ಮೂಲಕ ಜಿಲ್ಲಾ ನ್ಯಾಯಾಧೀಶರ ನೇಮಕಾತಿ ನಡೆಸುವ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಮತ್ತು ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಹೈಕೋರ್ಟ್‌ಗೂ ನೋಟಿಸ್‌ ಕೊಡಲಾಗಿದೆ.

ADVERTISEMENT

ಜಿಲ್ಲಾ ನ್ಯಾಯಾಲಯಗಳ ಶೇ 25ರಷ್ಟು ಹುದ್ದೆಗಳಿಗೆ ನಡೆಯುವ ನೇರ ನೇಮಕಾತಿಯು ಸತತ ಏಳು ವರ್ಷ ವಕೀಲಿ ವೃತ್ತಿ ನಡೆಸಿದವರಿಗೆ ಮೀಸಲು. ಹಾಗಾಗಿ, ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿರುವವರು ನೇರ ನೇಮಕಾತಿಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು 2020ರ ಫೆಬ್ರುವರಿ 19ರಂದು ನೀಡಿದ್ದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು.

ನೇರ ನೇಮಕಾತಿ ಎಂಬುದು ವಕೀಲರಿಗೆ ಸೀಮಿತ ಎಂದು ವ್ಯಾಖ್ಯಾನಿಸಬಾರದು. ಸೇವೆಯಲ್ಲಿ ಇರುವ ನ್ಯಾಯಾಧೀಶರು ಬೇರೆ ಅರ್ಹತೆಗಳನ್ನು ಪೂರೈಸಿದ್ದರೆ ಅವರಿಗೂ ನೇರ ನೇಮಕಾತಿಯಲ್ಲಿ ಅವಕಾಶ ಕೊಡಬೇಕು. ಸಿವಿಲ್‌ ನ್ಯಾಯಾಧೀಶರು ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರಾಗುವುದನ್ನು ತಡೆಯುವುದು ಸಮಾನತೆಯ ತತ್ವಕ್ಕೆ ವಿರುದ್ಧ ಎಂದು ಕರ್ನಾಟಕದ ಅರ್ಜಿದಾರರು ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.