ADVERTISEMENT

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಪಂಚೋಲಿ, ಅರಾಧೆ ನೇಮಕ: ಅಧಿಸೂಚನೆ ಪ್ರಕಟ

ಪಿಟಿಐ
Published 27 ಆಗಸ್ಟ್ 2025, 11:39 IST
Last Updated 27 ಆಗಸ್ಟ್ 2025, 11:39 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಪಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಪುಲ್‌ ಮನುಭಾಯ್‌ ಪಂಚೋಲಿ ಹಾಗೂ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರನ್ನು ಬುಧವಾರ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇವರಿಬ್ಬರೂ ಪ್ರಮಾಣವಚನ ಸ್ವೀಕರಿಸಿದ ನಂತರ ಸುಪ್ರೀಂ ಕೋರ್ಟ್‌ 34 ನ್ಯಾಯಮೂರ್ತಿಗಳನ್ನು ಒಳಗೊಂಡಂತಾಗುತ್ತದೆ. ಈ ಮೂಲಕ ಖಾಲಿ ಇದ್ದ ಎಲ್ಲಾ ನ್ಯಾಯಮೂರ್ತಿಗಳ ಸ್ಥಾನಗಳನ್ನು ಭರ್ತಿ ಮಾಡಿದಂತಾಗಿದೆ.

ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಪಂಚೋಲಿ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ವಿಕ್ರಂ ನಾಥ್‌, ಜೆ.ಕೆ. ಮಾಹೇಶ್ವರಿ ಮತ್ತು ನಾಗರತ್ನ ಅವರ ಕೊಲಿಜಿಯಂ ಸೋಮವಾರ ಶಿಫಾರಸು ಮಾಡಿತ್ತು.

ADVERTISEMENT

ನ್ಯಾಯಮೂರ್ತಿ ಪಂಚೋಲಿ ಅವರು 2031ರ ವೇಳೆಗೆ ಮುಖ್ಯ ನ್ಯಾಯಮೂರ್ತಿಯಾಗುವ ಸರತಿಯಲ್ಲಿದ್ದಾರೆ. ಇವರು ಮೇ 27, 2033ರಂದು ನಿವೃತ್ತರಾಗಲಿದ್ದಾರೆ.

1968ರ ಮೇ 28ರಂದು ಅಹಮದಾಬಾದ್‌ನಲ್ಲಿ ಜನಿಸಿದ ಪಂಚೋಲಿ 2014ರ ಅಕ್ಟೋಬರ್ 1ರಂದು ಗುಜರಾತ್ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2016ರಲ್ಲಿ ಅವರು ಶಾಶ್ವತ ನ್ಯಾಯಮೂರ್ತಿಯಾಗಿ ದೃಢೀಕರಿಸಲ್ಪಟ್ಟರು.

1964ರ ಏಪ್ರಿಲ್ 13ರಂದು ಜನಿಸಿದ ನ್ಯಾಯಮೂರ್ತಿ ಅರಾಧೆ, 2009ರ ಡಿಸೆಂಬರ್ 29ರಂದು ಮಧ್ಯಪ್ರದೇಶ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2011ರಲ್ಲಿ ಅವರು ಶಾಶ್ವತ ನ್ಯಾಯಮೂರ್ತಿಯಾಗಿ ದೃಢೀಕರಿಸಲ್ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.