ADVERTISEMENT

ಕೇರಳ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಸುಪ್ರೀಂ ಕೋರ್ಟ್ ಕಳವಳ

‘ನಾವೆಲ್ಲ ಒಂದೇ ದೇಶದವರು, ಇಂತಹ ಕೃತ್ಯಗಳು ದುಃಖಕರ‘

ಪಿಟಿಐ
Published 11 ನವೆಂಬರ್ 2025, 13:36 IST
Last Updated 11 ನವೆಂಬರ್ 2025, 13:36 IST
...
...   

ನವದೆಹಲಿ: ಹಿಂದಿ ಮಾತನಾಡುವಂತೆ ಒತ್ತಾಯಿಸಿ ಕೇರಳದ ಇಬ್ಬರು ವಿದ್ಯಾರ್ಥಿಗಳ ಮೇಲೆ ದೆಹಲಿಯ ಸ್ಥಳೀಯರು ಮತ್ತು ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌, ‘ನಾವೆಲ್ಲ ಒಂದೇ ದೇಶದವರು’ ಎಂದು ಹೇಳಿದೆ.

‘ದೇಶದೊಳಗಿನ ಜನರನ್ನು ಸಂಸ್ಕೃತಿ ಮತ್ತು ಜನಾಂಗೀಯ ಭಿನ್ನತೆಯ ಕಾರಣಕ್ಕಾಗಿ‌ ಗುರಿಯಾಗಿಸುತ್ತಿರುವುದು ದುಃಖಕರ’ ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕುಮಾರ್‌ ಮತ್ತು ಅಲೋಕ್‌ ಅರಾಧೆ ‌ಅವರ ಪೀಠ ಬೇಸರ ವ್ಯಕ್ತಪಡಿಸಿದೆ.‌

ದೆಹಲಿ ವಿಶ್ವವಿ‌ದ್ಯಾಲಯದ ಜಾಕೀರ್ ಹುಸೇನ್‌ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಹಿಂದಿ ಭಾಷೆಯಲ್ಲಿ ಮಾತನಾಡುವಂತೆ ಬಲವಂತಪಡಿಸಲಾಗಿದೆ ಮತ್ತು ಅವರ ಸಾಂಪ್ರದಾಯಿಕ ಉಡುಗೆ(ಲುಂಗಿ) ಬಗ್ಗೆ ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ADVERTISEMENT

ಅರುಣಾಚಲ ಪ್ರದೇಶದ ವಿದ್ಯಾರ್ಥಿಯು ದೆಹಲಿಯಲ್ಲಿ ಹತ್ಯೆಯಾಗಿರುವ ಪ್ರಕರಣ ಸೇರಿದಂತೆ ಈಶಾನ್ಯ ರಾಜ್ಯಗಳ ಜನರ ಮೇಲೆ ನಡೆದ ಸರಣಿ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿ 2015ರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿ ಸಮಿತಿಯನ್ನು ರಚಿಸುವಂತೆ ಮತ್ತು ಜನಾಂಗೀಯ ತಾರತಮ್ಯ, ಹಿಂಸಾಚಾರ ಮತ್ತು ದೌರ್ಜನ್ಯಗಳಿಗೆ ಸಂಬಂಧಿಸಿ ಕಠಿಣ ಕ್ರಮ ಕೈಗೊಳ್ಳುವ ಹಾಗೂ ಜನಾಂಗೀಯ ದ್ವೇಷದ ಅಪರಾಧಗಳ ನಿಗ್ರಹಕ್ಕೆ ಸಲಹೆ ನೀಡುವ ಅಧಿಕಾರವನ್ನು ಸಮಿತಿಗೆ ನೀಡುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

‘ಲುಂಗಿ ಧರಿಸಿದ ಕಾರಣಕ್ಕೆ ಕೇರಳದ ವ್ಯಕ್ತಿಗೆ ದೆಹಲಿಯಲ್ಲಿ ಅಪಹಾಸ್ಯ ಮಾಡಿರುವ ಸುದ್ದಿಯನ್ನು ನಾವು ಇತ್ತೀಚೆಗೆ ಓದಿದ್ದೇವೆ. ಜನರು ಸಾಮರಸ್ಯದಿಂದ ಬದುಕುತ್ತಿರುವ‌ ಈ ದೇಶದಲ್ಲಿ ಇದು ಸ್ವೀಕಾರಾರ್ಹವಲ್ಲ. ಈ ಬಗ್ಗೆ ನೀವು ಗಮನಹರಿಸಲೇಬೇಕು’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್ ಕೆ.ಎಂ ನಟರಾಜ್‌ ಅವರಿಗೆ ನ್ಯಾಯಾಲಯ ಸೂಚಿಸಿದೆ.

ಈಗಾಗಲೇ ಸಮಿತಿಯನ್ನು ರಚಿಸಲಾಗಿದೆ ಎಂದು ಸಾಲಿಸಿಟರ್‌ ಜನರಲ್ ಉತ್ತರಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು ಸಮಿತಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.