ADVERTISEMENT

ನ್ಯಾ. ಗವಾಯಿ ಮೇಲೆ ಶೂ ಎಸೆಯಲು ಹೋಗಿದ್ದ ವಕೀಲ ರಾಕೇಶ್‌ಗೆ ಬಿತ್ತು ಚಪ್ಪಲಿ ಏಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2025, 11:26 IST
Last Updated 9 ಡಿಸೆಂಬರ್ 2025, 11:26 IST
<div class="paragraphs"><p>ನ್ಯಾ.ಗವಾಯಿ ಅವರ ಮೇಲೆ ಶೂ ಎಸೆಯಲು ಹೋಗಿದ್ದ ವಕೀಲ ರಾಕೇಶ್‌ಗೆ ಬಿತ್ತು ಚಪ್ಪಲಿ ಏಟು– ಘಟನೆ ನಡೆದ ಸಂದರ್ಭ</p></div>

ನ್ಯಾ.ಗವಾಯಿ ಅವರ ಮೇಲೆ ಶೂ ಎಸೆಯಲು ಹೋಗಿದ್ದ ವಕೀಲ ರಾಕೇಶ್‌ಗೆ ಬಿತ್ತು ಚಪ್ಪಲಿ ಏಟು– ಘಟನೆ ನಡೆದ ಸಂದರ್ಭ

   

ಬೆಂಗಳೂರು: ಬಿ.ಆರ್‌. ಗವಾಯಿ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿದ್ದಾಗ ರಾಕೇಶ್‌ ಕಿಶೋರ್‌ ಎನ್ನುವ ವಕೀಲ, ಕೋರ್ಟ್‌ ಹಾಲ್‌ನಲ್ಲೇ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದರು.

ಅಂದು ಹಲವರ ಕೆಂಗೆಣ್ಣಿಗೆ ಗುರಿಯಾಗಿದ್ದ ವಕೀಲ ರಾಕೇಶ್‌ ಕಿಶೋರ್‌ ಮೇಲೆ ಇಂದು ದೆಹಲಿಯ ಕರ್ಕರ್ದೂಮ ನ್ಯಾಯಾಲಯದ ಆವರಣದಲ್ಲಿ ಕೆಲವರು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ.

ADVERTISEMENT

ರಾಕೇಶ್ ಮೇಲೆ ಕೆಲವರು ಚಪ್ಪಲಿಯಿಂದ ಹಲ್ಲೆ ಮಾಡುತ್ತಿರುವ ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹಲ್ಲೆ ನಡೆಯುವ ವೇಳೆ ರಾಕೇಶ್‌ ಕಿಶೋರ್‌ ಸಹ ಪ್ರತಿರೋಧ ತೋರಿ ವಾಪಸ್ ಹಲ್ಲೆ ಮಾಡಲು ಮುಂದಾಗುತ್ತಿರುವುದು ವಿಡಿಯೊದಲ್ಲಿ ಕಾಣುತ್ತದೆ. ರಾಕೇಶ್ ಕಿಶೋರ್ ಮೇಲೆ ಹಲ್ಲೆ ಮಾಡಿದವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ಸೈಟ್ ವರದಿ ಮಾಡಿದೆ.

ನ್ಯಾ. ಬಿ.ಆರ್. ಗವಾಯಿ ಅವರತ್ತ ಸುಪ್ರೀಂ ಕೋರ್ಟ್‌ನಲ್ಲೇ ಕಳೆದ ಅಕ್ಟೋಬರ್ 6ರಂದು ವಕೀಲ ರಾಕೇಶ್ ಶೂ ಎಸೆಯಲು ಮುಂದಾಗಿದ್ದರು. ಸ್ಥಳದಲ್ಲಿದ್ದ ವಕೀಲರು ಆತನನ್ನು ತಡೆದಿದ್ದರು.

ಸಿಜೆಐ ನೇತೃತ್ವದ ಪೀಠದ ಎದುರು ವಕೀಲರು ಪ್ರಕರಣಗಳ ಕುರಿತು ಪ್ರಸ್ತಾಪಿಸುತ್ತಿದ್ದಾಗ ಘಟನೆ ನಡೆದಿತ್ತು. ಆದಾಗ್ಯೂ, ಇದರಿಂದ ಕುಗ್ಗದ ಗವಾಯಿ ಅವರು, ಪ್ರಸ್ತಾವನೆಗಳನ್ನು ಮುಂದುವರಿಸುವಂತೆ ವಕೀಲರಿಗೆ ಸೂಚಿಸಿದ್ದರು. ಈ ಘಟನೆ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೋಲಾಹಲವನ್ನೇ ಎಬ್ಬಿಸಿತ್ತು.

'ಇದಕ್ಕೆಲ್ಲ ವಿಚಲಿತರಾಗದಿರಿ. ನಾನೂ ವಿಚಲಿತಗೊಳ್ಳುವುದಿಲ್ಲ. ಇಂತಹ ವಿಚಾರಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ' ಎಂದು ಅಂದೇ ಗವಾಯಿ ಅವರು ಹೇಳಿ, ಆರೋಪಿ ರಾಕೇಶ್‌ನನ್ನು ಬಿಟ್ಟು ಬಿಡಿ ಎಂದು ಉದಾರತೆ ತೋರಿದ್ದರು.

ಆದರೆ, ತನ್ನ ತಪ್ಪಿಗೆ ಕ್ಷಮೆಯೂ ಕೇಳದ ರಾಕೇಶ್ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಆತನ ವಿರುದ್ಧ ಪ್ರಕರಣ ದಾಖಲಿಸಲು ಸಿಜೆಐ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು.

ದೇಶದಾದ್ಯಂತ ಸುದ್ದಿಯಾಗಿದ್ದ ರಾಕೇಶ್

ಯುನೆಸ್ಕೊದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಮಧ್ಯಪ್ರದೇಶದ ಖಜುರಾಹೋದ ಜಾವರಿ ದೇವಾಲಯದಲ್ಲಿನ 7 ಅಡಿ ಎತ್ತರd ವಿಷ್ಣು ಮೂರ್ತಿಯ ತಲೆಯ ಭಾಗ ನಾಶವಾಗಿತ್ತು. ಈ ಮೂರ್ತಿಯನ್ನು ಮರುನಿರ್ಮಿಸಿ, ದೇವಾಲಯದಲ್ಲಿ ಮರುಸ್ಥಾಪಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ರಾಕೇಶ್ ಕಿಶೋರ್ ಇತರರು ಅರ್ಜಿ ಸಲ್ಲಿಸಿದ್ದರು.

ಸೆಪ್ಟೆಂಬರ್ 16ರಂದು ಅರ್ಜಿ ವಿಚಾರಣೆ ನಡೆಸಿದ್ದ ಗವಾಯಿ ಅವರು, ‘ಇದೊಂದು ಪ್ರಚಾರ ಹಿತಾಸಕ್ತಿ ಮೊಕದ್ದಮೆ... ಏನಾದರೂ ಮಾಡುವಂತೆ ಹೋಗಿ, ನಿಮ್ಮ ದೇವರಲ್ಲಿಯೇ ಕೇಳಿಕೊಳ್ಳಿ. ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಂಡಿದ್ದೀರಿ. ಆದ್ದರಿಂದ ನೀವೇ ಹೋಗಿ ದೇವರಲ್ಲಿ ಪ್ರಾರ್ಥಿಸಿ. ಇದು ಪುರಾತತ್ವ ಇಲಾಖೆಗೆ ಸೇರಿದ ಜಾಗ. ಇದಕ್ಕೆ ಇಲಾಖೆ ಅನುಮತಿ ನೀಡಬೇಕು’ ಎಂದು ಹೇಳಿದ್ದರು.

ಗವಾಯಿ ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ, ವಿವಾದದ ಸ್ವರೂಪವನ್ನು ಪಡೆದುಕೊಂಡಿತ್ತು. ಜಾಲತಾಣಗಳ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ್ದ ಗವಾಯಿ ಅವರು, ‘ನಾನು ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ. ಇವೆಲ್ಲವೂ ಸಾಮಾಜಿಕ ಜಾಲತಾಣಗಳ ಸೃಷ್ಟಿ’ ಎಂದಿದ್ದರು. ‘ಯಾವುದೇ ಹೇಳಿಕೆಯನ್ನು ಅತಿರಂಜಿತವಾಗಿ ಬಿಂಬಿಸಿ ಜಾಲ ತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ’ ಎಂದು ತುಷಾರ್‌ ಮೆಹ್ತಾ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.