ADVERTISEMENT

ಮಹದಾಯಿ: ‘ಸುಪ್ರೀಂ’ಗೆ ವಿಶೇಷ ಮೇಲ್ಮನವಿ

ನೀರು ಹಂಚಿಕೆ: ನ್ಯಾಯಮಂಡಳಿ ಐತೀರ್ಪು ಪ್ರಶ್ನಿಸಿದ ಕರ್ನಾಟಕ ಸರ್ಕಾರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 18:31 IST
Last Updated 12 ನವೆಂಬರ್ 2018, 18:31 IST

ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಜಲವಿವಾದ ನ್ಯಾಯಮಂಡಳಿ ನೀಡಿರುವ ಐತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದೆ.

ಕಾವೇರಿ ನದಿ ಪಾತ್ರದ ಎಲ್ಲ ರಾಜ್ಯಗಳಿಗೆ ನೀರನ್ನು ಹಂಚಿಕೆ ಮಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದಾಗ ಅನುಸರಿಸಿರುವ ‘ನ್ಯಾಯಸಮ್ಮತ ಹಂಚಿಕೆ’ಯ ಸೂತ್ರವನ್ನು ಮಹದಾಯಿ ನ್ಯಾಯಮಂಡಳಿ ಅನುಸರಿಸಿಲ್ಲ ಎಂದು ಈ ಮೇಲ್ಮನವಿಯಲ್ಲಿ ಒತ್ತಿ ಹೇಳಲಾಗಿದೆ.

ಮಹದಾಯಿ ನದಿ ನೀರು ಹಂಚಿಕೆ ಮಾಡಿ ಕಳೆದ ಆಗಸ್ಟ್‌ 14ರಂದು ಐತೀರ್ಪು ನೀಡಿರುವ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್‌ ನೇತೃತ್ವದ ನ್ಯಾಯಮಂಡಳಿಯು, ವಾರ್ಷಿಕ ಲಭ್ಯವಿರುವ ಒಟ್ಟು 188.06 ಟಿಎಂಸಿ ಅಡಿ ನೀರಿನಲ್ಲಿ 147 ಟಿಎಂಸಿ ಅಡಿ ನೀರನ್ನು ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗಲು ಅನುವು ಮಾಡಿಕೊಟ್ಟಿದೆ. ಇದರಿಂದ ಕರ್ನಾಟಕ್ಕೆ ಅನ್ಯಾಯವಾಗಿದೆ ಎಂದು ದೂರಲಾಗಿದೆ.

ADVERTISEMENT

ಬಳಕೆಯ ಉದ್ದೇಶಕ್ಕಾಗಿ ರಾಜ್ಯದ ಮನವಿಯಾದ 24.15 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡುವ ಬದಲು, 5.40 ಟಿಎಂಸಿ ಅಡಿ ನೀರನ್ನು ಮಾತ್ರ ನೀಡಲಾಗಿದೆ. ಕಳಸಾ ನಾಲೆಯ 3.56 ಟಿಎಂಸಿ ಅಡಿ ಹಾಗೂ ಬಂಡೂರಿ ನಾಲೆಯ 4 ಟಿಎಂಸಿ ಅಡಿ ನೀರನ್ನು ತಿರುವು ಯೋಜನೆ ಮೂಲಕ ಮಲಪ್ರಭಾ ನದಿಗೆ ಹರಿಸಿಕೊಳ್ಳಬೇಕೆಂಬ ರಾಜ್ಯದ ಯೋಜನೆಗೆ ಮನ್ನಣೆ ನೀಡದ ನ್ಯಾಯಮಂಡಳಿ, ಕ್ರಮವಾಗಿ ಕೇವಲ 1.72 ಹಾಗೂ 2.18 ಟಿಎಂಸಿ ಅಡಿ ನೀರಿಗೆ ಅನುಮತಿ ನೀಡಿದೆ ಎಂದು ವಿವರಿಸಲಾಗಿದೆ.

‘ನದಿ ಪಾತ್ರದ ಮೇಲ್ಭಾಗದ ರಾಜ್ಯಗಳಾದ ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಗೆ ನೀರು ನೀಡಿದಲ್ಲಿ ತೀವ್ರ ಸಮಸ್ಯೆಯಾಗಲಿದೆ’ ಎಂದು ಆರೋಪಿಸಿದ್ದ ನದಿಯ ಕೆಳಹಂತದ ರಾಜ್ಯವಾದ ಗೋವಾದ ಸರ್ಕಾರವು ಅದನ್ನು ನ್ಯಾಯಮಂಡಳಿ ಎದುರು ಸಾಬೀತುಪಡಿಸುವಲ್ಲಿ ವಿಫಲವಾಗಿದೆ. ಆದರೂ ವಿವಿಧ ಯೋಜನೆಗಳಡಿ ವಿದ್ಯುತ್‌ ಉತ್ಪಾದನೆಯ ಉದ್ದೇಶದಿಂದ 14 ಟಿಎಂಸಿ ಅಡಿ ಬದಲು ಕೇವಲ 8.02 ಟಿಎಂಸಿ ಅಡಿ ನೀರು ಒದಗಿಸಲಾಗಿದೆ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿದೆ.

ಹುಬ್ಬಳ್ಳಿ– ಧಾರವಾಡ ಅವಳಿ ನಗರ ಒಳಗೊಂಡಂತೆ ಮುಂಬೈ– ಕರ್ನಾಟಕ ಭಾಗದ ಅನೇಕ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಜನರ ಬೇಡಿಕೆಗೆ ಅನುಗುಣವಾಗಿ ಕುಡಿಯುವ ನೀರನ್ನು ಪಡೆಯುವ ರಾಜ್ಯದ ಉದ್ದೇಶವನ್ನು ಒಪ್ಪಿದ್ದ ಗೋವಾ ಸರ್ಕಾರ 2007ರಲ್ಲಿ ತನ್ನ ದೂರನ್ನು ಹಿಂದಕ್ಕೆ ಪಡೆದಿದ್ದರೂ, ನ್ಯಾಯಮಂಡಳಿ ಅತ್ಯಲ್ಪ ಪ್ರಮಾಣದ ನೀರನ್ನು ಹಂಚಿಕೆ ಮಾಡಿದೆ ಎಂದು ಮೇಲ್ಮನವಿಯಲ್ಲಿ ಪ್ರಮುಖವಾಗಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.