
ನವದೆಹಲಿ: ‘ಸರ್ಕಾರಿ ಕಡ್ಡಾಯ ಸೇವಾ ಬಾಂಡ್ ಅವಧಿಯನ್ನು ಮುಂದೂಡುವ ಮೂಲಕ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸೂಪರ್ ಸ್ಪೆಷಾಲಿಟಿ ಕೋರ್ಸ್ ತೆಗೆದುಕೊಳ್ಳಲು ಅನುವು ಮಾಡಿಕೊಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು’ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
‘ಸೂಪರ್ ಸ್ಪೆಷಾಲಿಟಿ ಕೋರ್ಸ್ ಪೂರ್ಣಗೊಳಿಸುವ ಅಭ್ಯರ್ಥಿಗಳು ರಾಜ್ಯದಲ್ಲೇ ಸೇವೆ ಸಲ್ಲಿಸುವುದರಿಂದ ಹಲವು ಪ್ರಯೋಜನಗಳೂ ಆಗುತ್ತವೆ’ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ನೇತೃತ್ವದ ಪೀಠ ಹೇಳಿದೆ.
ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದನ್ನು ಅನೇಕ ರಾಜ್ಯಗಳು ಕಡ್ಡಾಯಗೊಳಿಸಿವೆ.
‘ಸೇವಾ ಬಾಂಡ್ ಸಲ್ಲಿಸಿದ ಅಭ್ಯರ್ಥಿಗಳು ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಅರ್ಹತೆಯ ಆಧಾರದ ಮೇಲೆ ಪ್ರವೇಶ ಪಡೆದಾಗ, ಅವರು ಆ ಕೋರ್ಸ್ ಅನ್ನು ಪೂರ್ಣಗೊಳಿಸುವವರೆಗೆ ಬಾಂಡ್‌ನಡಿ ಸೇವೆ ಸಲ್ಲಿಸುವುದನ್ನು ಮುಂದೂಡಲು ರಾಜ್ಯಗಳು ಕ್ರಮ ಕೈಗೊಳ್ಳಬೇಕು’ ಎಂದು ಪೀಠ ಸೂಚಿಸಿದೆ.
‘ಒಂದು ವೇಳೆ ಅಭ್ಯರ್ಥಿಯು ಮೊದಲು ಕಡ್ಡಾಯ ಸೇವೆಯನ್ನು ಪೂರ್ಣಗೊಳಿಸಿ, ಆನಂತರ ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಾದ ಎಂಸಿಎಚ್ ಮತ್ತು ಡಿಎಂಗೆ ಅರ್ಜಿ ಸಲ್ಲಿಸಬೇಕೆಂಬ ನಿಯಮವಿದ್ದರೆ, ಅಂತಹ ಸಂದರ್ಭಗಳಲ್ಲಿ ಕೆಲವು ಅಭ್ಯರ್ಥಿಗಳು ವಯೋಮಿತಿ ಅಥವಾ ಇತರ ಕಾರಣಗಳಿಂದ ಆ ಕೋರ್ಸ್‌ಗಳಿಗೆ ಸೇರಲು ಅನರ್ಹರಾಗುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದೆ.
ಶ್ಯಾಮ್ ಚಂದ್ರನ್ ಎಂಬುವವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಇವರು ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಾದ ಡಿಎಂ/ಎಂಸಿಎಚ್ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 9ನೇ ರ‍್ಯಾಂಕ್ ಪಡೆದಿದ್ದಾರೆ. ತಿರುವನಂತಪುರದ ಶ್ರೀ ಚಿತ್ರ ತಿರುನಾಳ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಆ್ಯಂಡ್ ಟೆಕ್ನಾಲಜಿಯಲ್ಲಿ ನಡೆಯುವ ಕೌನ್ಸೆಲಿಂಗ್‌ಗೆ ಹಾಜರಾಗಬೇಕಿದೆ.
ಅವರು ಹಿಮಾಚಲ ಪ್ರದೇಶ ರಾಜ್ಯದಲ್ಲಿ ತಮ್ಮ ಬಾಂಡ್ ಅವಧಿಯನ್ನು ಪೂರೈಸಲು ಕಡ್ಡಾಯ ಸೇವೆಗೆ ನಿಯೋಜನೆಗೊಳ್ಳುವ ಮೊದಲೇ ಡಿಎಂ/ಎಂಸಿಎಚ್ ಕೋರ್ಸ್‌ಗೆ ಆಯ್ಕೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.