
ನವದೆಹಲಿ: ಪ್ರವರ್ಗವಾರು ಮೀಸಲು ಕೋಟಾದ ಕಟ್–ಆಫ್ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಕಡ್ಡಾಯವಾಗಿ ಸಾಮಾನ್ಯ ಪ್ರವರ್ಗದಡಿ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು, ‘ಸಾಮಾನ್ಯ ವರ್ಗದ ಕಟ್–ಆಫ್ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಮೀಸಲು ವರ್ಗಕ್ಕೆ (ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ) ಸೇರಿದ ಅಭ್ಯರ್ಥಿಯನ್ನು ಸಾಮಾನ್ಯ ಪ್ರವರ್ಗದಡಿ ಖಾಲಿ ಹುದ್ದೆಗೆ ಅರ್ಹತೆ ಪಡೆದಿದ್ದಾರೆ ಎಂದು ಪರಿಗಣಿಸಬೇಕು ಎಂಬುದು ಕಾನೂನಿನ ಸ್ಥಾಪಿತ ತತ್ವ’ ಎಂದು ಹೇಳಿದೆ.
ಕೇರಳ ಹೈಕೋರ್ಟ್ 2020ರಲ್ಲಿ ನೀಡಿದ್ದ ತೀರ್ಪನ್ನು ರದ್ದುಗೊಳಿಸುವಾಗ ಪೀಠವು ಈ ಹೇಳಿಕೆ ನೀಡಿದೆ. ಮೀಸಲು ಪ್ರವರ್ಗದ ಅಭ್ಯರ್ಥಿ ಹೆಚ್ಚಿನ ಅಂಕಗಳನ್ನು ಪಡೆದಿದ್ದರೂ, ಆತನ ಬದಲು ಸಾಮಾನ್ಯ ವರ್ಗದ ಕೋಟಾದಡಿ ಸಾಮಾನ್ಯ ವರ್ಗದ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳುವಂತೆ ಕೇರಳ ಹೈಕೋರ್ಟ್ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ನಿರ್ದೇಶನ ನೀಡಿತ್ತು.
‘ಮೀಸಲಾತಿ ರಹಿತ’ ಪ್ರವರ್ಗವು ಸಾಮಾನ್ಯ ಅಭ್ಯರ್ಥಿಗಳಿಗೆ ಇರುವ ‘ಕೋಟಾ’ ಅಲ್ಲ. ಬದಲಾಗಿ, ಅರ್ಹತೆಯ ಆಧಾರದ ಮೇಲೆ ಎಲ್ಲರಿಗೂ ಲಭ್ಯವಿರುವ ‘ಮುಕ್ತ’ ಪ್ರವರ್ಗ ಆಗಿದೆ ಎಂದು ತೀರ್ಪು ನೀಡಿದ ನ್ಯಾಯಮೂರ್ತಿ ಶರ್ಮಾ ಹೇಳಿದ್ದಾರೆ.
ಮೀಸಲು ವರ್ಗದ ಅಭ್ಯರ್ಥಿಯು ಯಾವುದೇ ರಿಯಾಯಿತಿಗಳನ್ನು (ವಯಸ್ಸು ಅಥವಾ ಶುಲ್ಕ ಸಡಿಲಿಕೆ) ಪಡೆಯದೆ ಸಾಮಾನ್ಯ ಪ್ರವರ್ಗದ ಅಭ್ಯರ್ಥಿಗಳಿಗಿಂತ ಹೆಚ್ಚಿನ ಸಾಧನೆ ಮಾಡಿದರೆ, ಅವರನ್ನು ಸಾಮಾನ್ಯ ವರ್ಗದ ಅಭ್ಯರ್ಥಿ ಎಂದೇ ಪರಿಗಣಿಸಬೇಕು ಎಂದು ಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.