ನವದೆಹಲಿ: ಮೋಟಾರು ವಾಹನ ತೆರಿಗೆಯು ಎಲ್ಲಾ ವಾಹನಗಳಿಗೂ ಕಡ್ಡಾಯವಲ್ಲ. ಸಾರ್ವಜನಿಕ ಸ್ಥಳದಲ್ಲಿ ವಾಹನವನ್ನು ಬಳಸಿದಾಗ ಮಾತ್ರವೇ ಮಾಲೀಕನು ಈ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠವು, 2024ರ ಡಿಸೆಂಬರ್‌ನಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನಡೆಸಿತು.
‘ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ಬಳಸದೇ ಇದ್ದರೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಬಳಕೆಗೆ ಇರಿಸದಿದ್ದರೆ ಈ ಅವಧಿಯಲ್ಲಿ ಮಾಲೀಕನು ಮೋಟಾರು ವಾಹನ ತೆರಿಗೆಯನ್ನು ಪಾವತಿಸಬೇಕಿಲ್ಲ’ ಎಂದು ಪೀಠ ಹೇಳಿತು.
‘ಮೋಟಾರು ವಾಹನ ತೆರಿಗೆಯು ಪರಿಹಾರಾತ್ಮಕ ಸ್ವರೂಪವನ್ನು ಹೊಂದಿದೆ. ರಸ್ತೆ ಹಾಗೂ ಹೆದ್ದಾರಿಯಂತಹ ಸಾರ್ವಜನಿಕ ಮೂಲಸೌಕರ್ಯಗಳನ್ನು ಬಳಸುವ ವ್ಯಕ್ತಿಯು ಈ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ವ್ಯಕ್ತಿಯು ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ಬಳಸದೇ ಇದ್ದರೆ, ಸಾರ್ವಜನಿಕ ಮೂಲಸೌಕರ್ಯಗಳನ್ನು ಆತ ಬಳಸುತ್ತಿಲ್ಲ. ಹೀಗಿರುವಾಗ ಆತನ ಮೇಲೆ ತೆರಿಗೆ ಹೊರೆಯನ್ನು ಹೊರಿಸಬಾರದು’ ಎಂದೂ ಹೇಳಿದೆ.
ಆಂಧ್ರಪ್ರದೇಶ ಮೋಟಾರು ವಾಹನ ಕಾಯಿದೆ –1963ರ ಮೂರನೇ ಸೆಕ್ಷನ್ ಅನ್ನು ಉಲ್ಲೇಖಿಸಿದ ಪೀಠವು, ‘ಈ ನಿಬಂಧನೆಯಲ್ಲಿ ‘ಸಾರ್ವಜನಿಕ ಸ್ಥಳ’ದಲ್ಲಿ ವಾಹನ ಬಳಸಿದಾಗ ತೆರಿಗೆ ಪಾವತಿಸಬೇಕು ಎಂದು ಉಲ್ಲೇಖಿಸಲಾಗಿದೆ’ ಎಂದಿತು.
ರಾಷ್ಟ್ರೀಯ ಇಸ್ಪಾತ್ ನಿಗಮ ಲಿಮಿಟೆಡ್ (ಆರ್‌ಐಎನ್‌ಎಲ್) ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ‘ಈ ಪ್ರಕರಣದಲ್ಲಿ ಆರ್‌ಐಎನ್‌ಎಲ್, ತನ್ನ ನಿರ್ಬಂಧಿತ ಪ್ರದೇಶದಲ್ಲಿ ವಾಹನವನ್ನು ಬಳಸಿದೆ. ಅದು ಸಾರ್ವಜನಿಕ ಸ್ಥಳವಲ್ಲ’ ಎಂದೂ ಪೀಠ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.