ADVERTISEMENT

ಬೀದಿ ನಾಯಿ ಉಪದ್ರವಕ್ಕೆ ಕಡಿವಾಣ: ರಾಷ್ಟ್ರೀಯ ನೀತಿ ರಚನೆಗೆ ಸುಪ್ರೀಂಕೋರ್ಟ್ ಇಂಗಿತ

ಆ.11ರ ಆದೇಶ ಮಾರ್ಪಡಿಸಿದ ‘ಸುಪ್ರೀಂ’

ಪಿಟಿಐ
Published 22 ಆಗಸ್ಟ್ 2025, 15:40 IST
Last Updated 22 ಆಗಸ್ಟ್ 2025, 15:40 IST
–
   

ನವದೆಹಲಿ: ಬೀದಿ ನಾಯಿಗಳ ಉಪದ್ರವಕ್ಕೆ ಕಡಿವಾಣ ಹಾಕುವುದಕ್ಕಾಗಿ ರಾಷ್ಟ್ರವ್ಯಾಪಿ ಅನ್ವಯವಾಗುವ ನೀತಿಯೊಂದನ್ನು ರೂಪಿಸುವ ಇಂಗಿತವನ್ನು ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ಕೈಗೊಳ್ಳುವ ಕ್ರಮಗಳ ವ್ಯಾಪ್ತಿಯನ್ನು ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದ (ದೆಹಲಿ–ಎನ್‌ಸಿಆರ್‌) ಆಚೆಗೂ ವಿಸ್ತರಿಸಲು ಶುಕ್ರವಾರ ನಿರ್ಧರಿಸಿದೆ. 

ಬೀದಿ ನಾಯಿಗಳ ಉಪಟಳ ನಿಯಂತ್ರಿಸುವುದಕ್ಕಾಗಿ ಆಗಸ್ಟ್‌ 11ರಂದು ತಾನು ಹೊರಡಿಸಿದ್ದ ಆದೇಶ ‘ವಿಪರೀತ ಕಠೋರ’ವಾಗಿತ್ತು ಹಾಗೂ ‘ಸಹಾನುಭೂತಿಯಿಂದ ಕಾಣಬೇಕು’ ಎಂಬ ಮೌಲ್ಯಕ್ಕೆ ವಿರುದ್ಧವಾಗಿತ್ತು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ಆದೇಶವನ್ನು ಮಾರ್ಪಡಿಸಿ ಹಲವು ನಿರ್ದೇಶನಗಳನ್ನು ನೀಡಿದೆ. 

ಈ ವಿಚಾರವಾಗಿ ಜುಲೈ 28ರಂದು ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ಮೂವರು ಸದಸ್ಯರು ಇರುವ ವಿಶೇಷ ನ್ಯಾಯಪೀಠ ನಡೆಸಿತು.

ADVERTISEMENT

ಆಗಸ್ಟ್‌ 11ರಂದು ಹೊರಡಿಸಿದ್ದ ಆದೇಶದ, ಸೆರೆ ಹಿಡಿದ ನಾಯಿಗಳನ್ನು ಮತ್ತೆ ನಗರದಲ್ಲಿ ಬಿಡುವುದಕ್ಕೆ ನಿಷೇಧ ಹೇರುವ ಅಂಶವನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ ಎಂದು ಪೀಠವು ಹೇಳಿದೆ. 

ನ್ಯಾಯಮೂರ್ತಿಗಳಾದ ಸಂದೀಪ ಮೆಹ್ತಾ ಹಾಗೂ ಎನ್‌.ವಿ.ಅಂಜಾರಿಯಾ ಈ ಪೀಠದಲ್ಲಿದ್ದಾರೆ. 

ನಿರ್ದೇಶನ: ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಬೀದಿ ನಾಯಿಗಳಿಗೆ ಬೀದಿಗಳಲ್ಲಿ ಆಹಾರ ನೀಡುವುದನ್ನು ನಿಷೇಧಿಸಿರುವ ಪೀಠ, ಈ ಉದ್ದೇಶಕ್ಕಾಗಿಯೇ ದೆಹಲಿಯ ಪಾಲಿಕೆಗಳು ಪ್ರತ್ಯೇಕ ಸ್ಥಳಗಳನ್ನು ಗುರುತಿಸಬೇಕು ಎಂದು ಆದೇಶಿಸಿದೆ.

ಬೀದಿ ನಾಯಿಗಳಿಗೆ ಆಹಾರ ನೀಡುವುದಕ್ಕಾಗಿ ರಚಿಸಿರುವ ಪ್ರತ್ಯೇಕ ಸ್ಥಳಗಳ ಸಮೀಪ ಈ ಬಗ್ಗೆ ಮಾಹಿತಿ ಇರುವ ಫಲಕಗಳನ್ನು ಅಳವಡಿಸಬೇಕು. ಯಾವುದೇ ಸ್ಥಿತಿಯಲ್ಲಿಯೂ ಬೀದಿ ನಾಯಿಗಳಿಗೆ ಬೀದಿಗಳಲ್ಲಿ ಆಹಾರ ನೀಡುವುದಕ್ಕೆ ಅನುಮತಿ ನೀಡಬಾರದು. ಈ ನಿರ್ದೇಶನ ಉಲ್ಲಂಘಿಸಿರುವುದು ಕಂಡುಬಂದಲ್ಲಿ, ಸಂಬಂಧಿಸಿದವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಿದೆ.

ಈ ನಿರ್ದೇಶನಗಳು ದೇಶದಾದ್ಯಂತ ಅನ್ವಯವಾಗಲಿವೆ ಎಂದಿರುವ ನ್ಯಾಯಾಲಯ, ಈ ವಿಚಾರಕ್ಕೆ ಸಂಬಂಧಿಸಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಕಕ್ಷಿದಾರರನ್ನಾಗಿ ಮಾಡಿ ಆದೇಶಿಸಿದೆ.

ದೆಹಲಿಯಲ್ಲಿ ಬೀದಿ ನಾಯಿಗಳು ಕಚ್ಚಿದ ಪರಿಣಾಮ ರೇಬೀಸ್‌ ಸೋಂಕಿನಿಂದ ಬಳಲುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿತ್ತು. ವಿಶೇಷವಾಗಿ ಮಕ್ಕಳು ಹೆಚ್ಚು ಬಾಧಿತರಾಗಿದ್ದರು. ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

ಬೀದಿ ನಾಯಿಗಳನ್ನು ಹಿಡಿದು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್, ಆಗಸ್ಟ್‌ 11ರಂದು ಆದೇಶ ಹೊರಡಿಸಿದ ಬಳಿಕ ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು. ನಂತರ, ಈ ವಿಚಾರವನ್ನು ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ವಿಶೇಷ ಪೀಠಕ್ಕೆ ವರ್ಗಾಯಿಸಲಾಗಿತ್ತು.

ಆಗಸ್ಟ್‌ 14ರಂದು ವಿಚಾರಣೆ ನಡೆಸಿದ್ದ ವಿಶೇಷ ಪೀಠ, ಸ್ಥಳೀಯ ಆಡಳಿತಗಳ ನಿಷ್ಕ್ರಿಯತೆಯೇ ಬೀದಿ ನಾಯಿಗಳ ಸಮಸ್ಯೆಗೆ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. 

‘ಬಾಕಿ ಪ್ರಕರಣ: ‘ಸುಪ್ರೀಂ’ಗೆ ವರ್ಗಾಯಿಸಿ’ 

ಇದೇ ವಿಚಾರವಾಗಿ ವಿವಿಧ ಹೈಕೋರ್ಟ್‌ಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸುವಂತೆ ಸುಪ್ರೀಂ ಕೋರ್ಟ್‌ ಮಹಾ ಕಾರ್ಯದರ್ಶಿ ಅವರಿಗೆ ನ್ಯಾಯಪೀಠ ಸೂಚಿಸಿತು. ಬಾಕಿ ಇರುವ ಎಲ್ಲ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕು. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ನೀತಿಯೊಂದರನ್ನು ರೂಪಿಸಲು ಇಲ್ಲವೇ ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕೆ ಇದರಿಂದ ಸಾಧ್ಯವಾಗಲಿದೆ ಎಂದು ಪೀಠ ಹೇಳಿದೆ.

ಠೇವಣಿಗೆ ಸೂಚನೆ

ಬೀದಿ ನಾಯಿಗಳ ವಿಚಾರವಾಗಿ ಸುಪ್ರೀಂ ಕೋರ್ಟ್‌ ಕದ ತಟ್ಟಿರುವ ಪ್ರತಿಯೊಬ್ಬ ಶ್ವಾನ ಪ್ರಿಯ ಮತ್ತು ಪ್ರತಿಯೊಂದು ಎನ್‌ಜಿಒ ಕ್ರಮವಾಗಿ ₹25 ಸಾವಿರ ಹಾಗೂ ₹2 ಲಕ್ಷ ಮೊತ್ತವನ್ನು ಏಳು ದಿನಗಳ ಒಳಗಾಗಿ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ ಬಳಿ ಠೇವಣಿ ಇಡಬೇಕು. ಈ ಮೊತ್ತವನ್ನು ಠೇವಣಿ ಇಡಲು ವಿಫಲವಾದಲ್ಲಿ ಸಂಬಂಧಪಟ್ಟ ವ್ಯಕ್ತಿ/ಎನ್‌ಜಿಒಗೆ ಈ ಪ್ರಕರಣ ಕುರಿತ ಮುಂದಿನ ವಿಚಾರಣೆ ವೇಳೆ ಹಾಜರಾಗಲು ಅನುಮತಿ ನೀಡುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಸಂಬಂಧಪಟ್ಟ ಪಾಲಿಕೆಗಳ ವತಿಯಿಂದ ಬೀದಿ ನಾಯಿಗಳಿಗಾಗಿ ಮೂಲಸೌಕರ್ಯ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲು ಈ ಮೊತ್ತವನ್ನು ವಿನಿಯೋಗಿಸಲಾಗುವುದು ಎಂದೂ ಹೇಳಿದೆ.

ನಿರ್ದೇಶನಗಳು

  • ಈಗಾಗಲೇ ಹಿಡಿಯಲಾಗಿರುವ ಬೀದಿ ನಾಯಿಗಳಿಗೆ ಲಸಿಕೆ ಹಾಕಿ ಅವುಗಳನ್ನು ಈ ಮುಂಚೆ ಇದ್ದ ಸ್ಥಳಗಳಿಗೇ ಬಿಡಬೇಕು. ಅವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನೂ ಮಾಡಬೇಕು

  • ದೆಹಲಿ ಗಾಜಿಯಾಬಾದ್‌ ನೊಯಿಡಾ ಫರೀದಾಬಾದ್‌ ಹಾಗೂ ಗುರುಗ್ರಾಮ ನಗರಗಳ ವಿವಿಧ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಬೇಕು. ಈ ನಾಯಿಗಳಿಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿ ಲಸಿಕೆ ಹಾಕಬೇಕು. ನಂತರ ಈ ಮೊದಲು ಅವುಗಳ ಇದ್ದ ಸ್ಥಳಗಳಿಗೆ ಬಿಡಬೇಕು

  • ರೇಬಿಸ್‌ ಸೋಂಕು ಇರುವ ಅಥವಾ ಸೋಂಕು ಶಂಕೆಯ ನಾಯಿಗಳು ಹಾಗೂ ವ್ಯಗ್ರ ವರ್ತನೆ ತೋರುವ ನಾಯಿಗಳಿಗೆ ಈ ನಿರ್ದೇಶನ ಅನ್ವಯಿಸುವುದಿಲ್ಲ

  • ರೇಬಿಸ್‌ ಸೋಂಕು ಇರುವ ಅಥವಾ ಸೋಂಕಿನ ಶಂಕೆ ಇರುವ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ಇವುಗಳನ್ನು ಮತ್ತೆ ಬೀದಿಗಳಿಗೆ ಬಿಡಬಾರದು

  • ರೇಬಿಸ್‌ ಸೋಂಕು ಇರುವ/ಸೋಂಕು ಶಂಕಿತ ನಾಯಿಗಳು ಆಕ್ರಮಣಕಾರಿ ವರ್ತನೆ ತೋರುವ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನೆರವೇರಿಸಿದ ಬಳಿಕ ಅವುಗಳನ್ನು ಪ್ರತ್ಯೇಕ ಆಶ್ರಯತಾಣಗಳಲ್ಲಿ ಇರಿಸಬೇಕು

  • ಬೀದಿ ನಾಯಿಗಳಿಗೆ ಸಂಬಂಧಿಸಿದ ನಿರ್ದೇಶನಗಳು ಉಲ್ಲಂಘನೆಯಾಗಿರುವುದು ಕಂಡುಬಂದಲ್ಲಿ ಈ ಕುರಿತು ಮಾಹಿತಿ ನೀಡುವುದಕ್ಕಾಗಿ ಪ್ರತಿಯೊಂದು ಪಾಲಿಕೆಯು ಸಹಾಯವಾಣಿ ಆರಂಭಿಸಬೇಕು

  • ಈ ನಿರ್ದೇಶನಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಯಾವುದೇ ವ್ಯಕ್ತಿ/ಸಂಘಟನೆ ಅಡ್ಡಿಪಡಿಸಬಾರದು. ಅಡ್ಡಿಪಡಿಸುವುದು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ‘ಕರ್ತವ್ಯಕ್ಕೆ ಅಡ್ಡಿ’ ಪಡಿಸಿದ ಆರೋಪದಡಿ ಕ್ರಮ ಜರುಗಿಸಬೇಕು 

  • ಬೀದಿ ನಾಯಿಗಳನ್ನು ಹಿಡಿಯುವ ಸಿಬ್ಬಂದಿ ಪಶುವೈದ್ಯರು ಪ್ರಾಣಿಗಳ ಜನನ ನಿಯಂತ್ರಣ ಉದ್ದೇಶಕ್ಕಾಗಿ ಲಭ್ಯವಿರುವ ವಿಶೇಷವಾಗಿ ಮಾರ್ಪಡಿಸಿದ ಸಾಗಣೆ ವಾಹನಗಳು ಮತ್ತು ಪಂಜರಗಳ ಕುರಿತು ಮಾಹಿತಿ ಒಳಗೊಂಡ ಪ್ರಮಾಣಪತ್ರವನ್ನು ಎಲ್ಲ ಪಾಲಿಕೆಗಳು ಸಲ್ಲಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.