ADVERTISEMENT

ದೇಶದ್ರೋಹ ಕಾಯ್ದೆ ಪರಿಶೀಲನೆಗೆ ಸುಪ್ರೀಂ ಕೋರ್ಟ್ ನಿರ್ಧಾರ

ಪಿಟಿಐ
Published 31 ಮೇ 2021, 19:08 IST
Last Updated 31 ಮೇ 2021, 19:08 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಮಾಧ್ಯಮ ಹಕ್ಕುಗಳು ಮತ್ತು ವಾಕ್ ಸ್ವಾತಂತ್ರ್ಯವನ್ನು ಗಮನದಲ್ಲಿರಿಸಿಕೊಂಡು, ದೇಶದ್ರೋಹ ಕಾನೂನಿನ ವ್ಯಾಖ್ಯಾನವನ್ನು ಪರಿಶೀಲನೆಗೆ ಒಳಪಡಿಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ತೆಲುಗು ಸುದ್ದಿವಾಹಿನಿಗಳಾದ ಟಿವಿ5 ಮತ್ತು ಆಂಧ್ರಜ್ಯೋತಿ ವಿರುದ್ಧ ದೇಶದ್ರೋಹ ಕಾನೂನಿನ ಅಡಿಯಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಕೋರ್ಟ್ ನಿರ್ದೇಶನ ನೀಡಿದೆ. ವಾಹಿನಿಗಳ ಸಿಬ್ಬಂದಿ, ಆಡಳಿತ ಮಂಡಳಿ ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ ಆಂಧ್ರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಬಂಡಾಯ ಸಂಸದ ಕೆ. ರಘುರಾಮ ಕೃಷ್ಣರಾಜು ಅವರ ಆಕ್ಷೇಪಾರ್ಹ ಭಾಷಣವನ್ನು ಪ್ರಸಾರ ಮಾಡಿದ ಈ ಎರಡೂ ವಾಹಿನಿಗಳ ವಿರುದ್ಧ ಆಂಧ್ರಪ್ರದೇಶ ಸರ್ಕಾರವು ಪ್ರಕರಣ ದಾಖಲಿಸಿದೆ.

ADVERTISEMENT

‘ವಿಶೇಷವಾಗಿ ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯ ವಿಷಯದಲ್ಲಿ 124ಎ ಸೆಕ್ಷನ್ (ದೇಶದ್ರೋಹ) ಮತ್ತು 153ನೇ ಸೆಕ್ಷನ್‌ಗಳ (ವರ್ಗಗಳ ನಡುವೆ ದ್ವೇಷ ಹುಟ್ಟುಹಾಕುವುದು) ವ್ಯಾಖ್ಯಾನ ಅಗತ್ಯವಿದ್ದು, ಆ ಬಗ್ಗೆ ಪರಿಶೀಲನೆ ನಡೆಸುತ್ತೇವೆ’ ಎಂದು ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್, ಎಲ್.ಎನ್. ರಾವ್ ಮತ್ತು ಎಸ್.ರವೀಂದ್ರ ಭಟ್ ಅವರ ಪೀಠ ತಿಳಿಸಿದೆ.

ದೇಶದ್ರೋಹ ಸೇರಿದಂತೆ ವಿವಿಧ ಕಾಯ್ದೆಗಳಡಿ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸುದ್ಧಿ ವಾಹಿನಿಗಳು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ಕೋರ್ಟ್, ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಸುದ್ದಿ ವಾಹಿನಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ರಾಜು ವಿರುದ್ಧ ದಾಖಲಿಸಲಾಗಿರುವ ದೇಶದ್ರೋಹ ಪ್ರಕರಣದ ಜತೆಗೆ ಸಂಬಂಧ ಇದೆ.ತಮ್ಮದೇ ಪಕ್ಷದ ನೇತೃತ್ವದ ರಾಜ್ಯ ಸರ್ಕಾರವನ್ನು ಟೀಕಿಸಿರುವ ರಾಜು ಅವರನ್ನು ಕೇಂದ್ರವಾಗಿರಿಸಿಕೊಂಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಾಹಿನಿಗಳು ಆರೋಪಿಸಿವೆ. ಈ ಪ್ರಕರಣದಲ್ಲಿ ರಾಜು ಅವರನ್ನು ಬಂಧಿಸಿರುವ ಸಿಐಡಿ, ಎರಡು ಮಾಧ್ಯಮ ಸಂಸ್ಥೆಗಳು ಮತ್ತು ಇತರರನ್ನು ಆರೋಪಿಗಳೆಂದು ಹೆಸರಿಸಿದೆ.

ರಾಜು ವಿರುದ್ಧದ ಆರೋಪವೇನು: ‘ಸಂಸದ ರಾಜು ಅವರು ವಿಶೇಷವಾಗಿ ಎರಡು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ. ಸರ್ಕಾರವು ಈ ಎರಡು ಸಮುದಾಯಗಳ ಪರವಾಗಿದೆ ಎಂದು ಬಿಂಬಿಸಲು ಪ್ರಯತ್ನಿಸುವ ಮೂಲಕ ಸಮುದಾಯಗಳ ನಡುವೆ ದ್ವೇಷ ಉಂಟುಮಾಡಲು ಪ್ರಯತ್ನಿಸಿದ್ದಾರೆ’ ಎಂದು ಸಿಐಡಿ ಆರೋಪಿಸಿದೆ. ಅನಾರೋಗ್ಯದ ಕಾರಣ ರಾಜು ಅವರಿಗೆ ಮೇ 21ರಂದು ಜಾಮೀನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.