ADVERTISEMENT

ಉಚಿತ ಕೊಡುಗೆ, ಅಭಿವೃದ್ಧಿ ಯೋಜನೆ ಭಿನ್ನ: ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 21:23 IST
Last Updated 11 ಆಗಸ್ಟ್ 2022, 21:23 IST
   

ನವದೆಹಲಿ: ಸರ್ಕಾರವು ನೀಡುವ ಉಚಿತ ಕೊಡುಗೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ನಡುವೆ ವ್ಯತ್ಯಾಸ ಇದೆ. ಉಚಿತ ಕೊಡುಗೆಗಳಿಂದಾಗಿ ಅರ್ಥವ್ಯವಸ್ಥೆಯು ಕಳೆದುಕೊಳ್ಳುವ ಹಣ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಖರ್ಚಾಗುವ ಹಣದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಉಚಿತ ಕೊಡುಗೆ ನೀಡುವುದಾಗಿ ಘೋಷಣೆ ಮಾಡಿದ ಪಕ್ಷಗಳ ಮಾನ್ಯತೆ ರದ್ದು ಮಾಡಬೇಕು ಎಂದು ಕೋರಿ ಸಲ್ಲಿಕೆ
ಯಾಗಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ನಿರಾಕರಿಸಿದೆ.

ಚುನಾವಣೆ ಸಂದರ್ಭದಲ್ಲಿ ಉಚಿತ ಕೊಡುಗೆಗಳನ್ನು ಘೋಷಿಸುವುದಕ್ಕೆ ತಡೆ ಒಡ್ಡಬೇಕು ಎಂದು ಕೋರಿ ಬಿಜೆಪಿ ಮುಖಂಡ ಅಶ್ವಿನಿ ಕುಮಾರ್‌ ಉಪಾಧ್ಯಾಯ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಮತ್ತು ನ್ಯಾಯಮೂರ್ತಿ ಕೃಷ್ಣಮುರಾರಿ ಅವರಿದ್ದ ಪೀಠವು ನಡೆಸಿತು.

ADVERTISEMENT

ಚುನಾವಣಾ ಸಂದರ್ಭದಲ್ಲಿ ಉಚಿತ ಕೊಡುಗೆಗಳ ವಿವೇಚನಾರಹಿತ ಭರವಸೆ ನೀಡುವುದು ಗಂಭೀರ ವಿಚಾರ. ಈ ಕುರಿತು ಯಾವುದೇ ಕಾಯ್ದೆ ಇಲ್ಲ. ಹಾಗಿದ್ದರೂ ಸಂಸತ್ತಿನ ವ್ಯಾಪ್ತಿಯಲ್ಲಿ ಅತಿಕ್ರಮಣ ಮಾಡುವುದಿಲ್ಲ ಎಂದು ರಮಣ ಹೇಳಿದರು.

ಹೆಚ್ಚು ಮತಗಳನ್ನು ಪಡೆಯುವುದಕ್ಕಾಗಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುವುದನ್ನು ನಿಯಂತ್ರಿಸಲು ಮಾರ್ಗಸೂಚಿಯನ್ನು ಕೇಂದ್ರವು ರೂಪಿಸಬೇಕು. ಕಾಯ್ದೆ ರೂಪುಗೊಳ್ಳುವವರೆಗೆ ಅದನ್ನು ಅನುಸರಿಸಬಹುದು ಎಂದು ಪೀಠವು ಹೇಳಿದೆ.

ಕೇಂದ್ರ ಸರ್ಕಾರದ ಕಾರ್ಯದರ್ಶಿ, ರಾಜ್ಯಗಳ ಕಾರ್ಯದರ್ಶಿಗಳು, ಪ್ರತಿ ರಾಜಕೀಯ ಪಕ್ಷದ ಪ್ರತಿನಿಧಿ, ನೀತಿ ಆಯೋಗದ ಪ್ರತಿನಿಧಿ, ಆರ್‌ಬಿಐ, ಹಣಕಾಸು ಆಯೋಗ, ರಾಷ್ಟ್ರೀಯ ತೆರಿಗೆ ಪಾವತಿದಾರರ ಸಂಘ ಮತ್ತು ಇತರರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಬೇಕು ಎಂಬ ಪ್ರಸ್ತಾವ ಇದೆ ಎಂದು ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಹೇಳಿದರು. ಕಾಯ್ದೆ ಸಿದ್ಧವಾಗುವವರೆಗೆ ಅನುಸರಿಸುವುದಕ್ಕಾಗಿ ಪೀಠವು ಸೂಚನೆಗಳನ್ನು ನೀಡಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.