ADVERTISEMENT

ಜೈಲಿಗೆ ಹಾಕಿದರೆ ಬುದ್ಧಿ ಬರುತ್ತೆ: ಕೃಷಿ ತ್ಯಾಜ್ಯ ಸುಡುವ ಬಗ್ಗೆ ‘ಸುಪ್ರೀಂ’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಸೆಪ್ಟೆಂಬರ್ 2025, 10:30 IST
Last Updated 17 ಸೆಪ್ಟೆಂಬರ್ 2025, 10:30 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ದೆಹಲಿಯಲ್ಲಿ ಚಳಿಗಾಲದ ಸಂದರ್ಭ ಮಾಲಿನ್ಯ ಹೆಚ್ಚಳಕ್ಕ ಕೃಷಿ ತ್ಯಾಜ್ಯ ಸುಡುವ ಪ್ರಮುಖ ಸಮಸ್ಯೆಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಕೆಲವರನ್ನು ಜೈಲಿಗೆ ಕಳುಹಿಸುವುದರಿಂದ ಸರಿಯಾದ ಸಂದೇಶ ಕಳುಹಿಸಿದಂತಾಗುತ್ತದೆ ಎಂದು ಹೇಳಿದೆ.

ಜನರಿಗೆ ಆಹಾರ ಒದಗಿಸುವಲ್ಲಿ ರೈತರ ಪಾತ್ರವನ್ನು ಒತ್ತಿ ಹೇಳಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ಹಾಗೆಂದಮಾತ್ರಕ್ಕೆ ಅವರು ಪರಿಸರ ಸಂರಕ್ಷಿಸುವುದಿಲ್ಲ ಎಂದು ಹೇಳಲು ಬರುವುದಿಲ್ಲ ಎಂದಿದ್ದಾರೆ.

ಅಮಿಕಸ್ ಕ್ಯೂರಿ ಅಪರಾಜಿತ ಸಿಂಗ್ ಅವರ ವಾದ ಆಲಿಸಿದ ಸಿಜೆಐ ಈ ಹೇಳಿಕೆ ನೀಡಿದ್ದಾರೆ.

ADVERTISEMENT

'ಕೃಷಿ ತ್ಯಾಜ್ಯ ಸುಡುವ ಕೆಲವರನ್ನು ಜೈಲಿಗೆ ಕಳುಹಿಸಿದರೆ ಅದು ಸರಿಯಾದ ಸಂದೇಶವನ್ನು ರವಾನಿಸಿದಂತಾಗುತ್ತದೆ. ಪರಿಸರವನ್ನು ರಕ್ಷಿಸುವ ನಿಜವಾದ ಉದ್ದೇಶ ನಿಮಗಿದ್ದರೆ ರೈತರಿಗೆ ದಂಡ ವಿಧಿಸುವ ನಿಬಂಧನೆಗಳ ಬಗ್ಗೆ ನೀವು ಏಕೆ ಯೋಚಿಸಬಾರದು...’ಎಂದು ಪಂಜಾಬ್ ರಾಜ್ಯವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಹುಲ್ ಮೆಹ್ರಾ ಅವರಿಗೆ ಸಿಜೆಐ ಈ ಪ್ರಶ್ನೆ ಹಾಕಿದ್ದಾರೆ.

ದೆಹಲಿ-ಎನ್‌ಸಿಆರ್‌ನಲ್ಲಿ ಪಟಾಕಿ ಸಿಡಿಸುವುದು ಮತ್ತು ಕೃಷಿ ತ್ಯಾಜ್ಯ ಸುಡುವುದು ಸೇರಿದಂತೆ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಈ ಮಾತುಗಳನ್ನು ಆಡಿದ್ದಾರೆ.

ಕೆಲವು ವರದಿಗಳನ್ನು ಉಲ್ಲೇಖಿಸಿ ತ್ಯಾಜ್ಯವನ್ನು ಜೈವಿಕ ಇಂಧನವಾಗಿ ಬಳಸಬಹುದು ಎಂದಿದ್ದಾರೆ.

‘ಇದನ್ನು ಜೈವಿಕ ಇಂಧನವಾಗಿಯೂ ಬಳಸಬಹುದು ಎಂದು ನಾನು ಪತ್ರಿಕೆಗಳಲ್ಲಿ ಓದಿದ್ದೆ. ರೈತರು ವಿಶೇಷವಾದವರು. ಅವರು ಬೆಳೆಯುತ್ತಿರುವುದರಿಂದಾಗಿ ನಾವು ತಿನ್ನುತ್ತಿದ್ದೇವೆ.. ಆದರೆ, ನೀವು ಪರಿಸರವನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳುವಂತಿಲ್ಲ’ ಎಂದು ಸಿಜಿಐ ಹೇಳಿದ್ದಾರೆ.

ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಮಾತ್ರ ಪಟಾಕಿ ನಿಷೇಧವೇಕೆ? ಎಂದು ಸಿಜೆಐ ಪ್ರಶ್ನಿಸಿದ ಕೆಲ ದಿನಗಳ ಬೆನ್ನಲ್ಲೇ ಈ ಅರ್ಜಿ ವಿಚಾರಣೆಗೆ ಬಂದಿದೆ.

'ಎನ್‌ಸಿಆರ್‌ನ ನಾಗರಿಕರು ಮಾಲಿನ್ಯರಹಿತ ಗಾಳಿಗೆ ಅರ್ಹರಾಗಿದ್ದರೆ, ಇತರ ನಗರಗಳ ಜನರು ಏಕೆ ಅರ್ಹರಲ್ಲ? ರಾಜಧಾನಿ ಮತ್ತು ಸುಪ್ರೀಂ ಕೋರ್ಟ್ ಈ ಪ್ರದೇಶದಲ್ಲಿದೆ ಎಂಬ ಕಾರಣಕ್ಕೆ ಇಲ್ಲಿರುವವರು ಮಾಲಿನ್ಯರಹಿತ ಗಾಳಿಯನ್ನು ಮಾತ್ರ ಪಡೆಯಬೇಕು ಎಂಬ ಅರ್ಥವಲ್ಲ’ ಎಂದು ಸಿಜೆಐ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.