
ನವದೆಹಲಿ: ‘ಆ್ಯಸಿಡ್ ದಾಳಿ ಪ್ರಕರಣಗಳ ಬಗ್ಗೆ ವರ್ಷವಾರು ಮಾಹಿತಿ ನೀಡಿ. ನ್ಯಾಯಾಲಯಗಳಲ್ಲಿ ಈ ಪ್ರಕರಣಗಳ ವಿಚಾರಣೆ ಯಾವ ಹಂತದಲ್ಲಿದೆ ಮತ್ತು ಸಂತ್ರಸ್ತರಿಗೆ ಪುನರ್ವಸತಿ ಸೇರಿ ಯಾವ ರೀತಿಯಲ್ಲಿ ಬೆಂಬಲ ನೀಡಲಾಗುತ್ತಿದೆ ಎಂಬುದನ್ನು ನೀಡಿ’ ಎಂದು ಕೇಂದ್ರಾಡಳಿತ ಪ್ರದೇಶ ಮತ್ತು ಎಲ್ಲ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಆರ್. ಮಹದೇವನ್ ಹಾಗೂ ಜಾಯ್ ಮಾಲ್ಯಾ ಬಾಗ್ಚಿ ಅವರ ಪೀಠ ಮಂಗಳವಾರ ಈ ಸೂಚನೆ ನೀಡಿತು. ‘ವಿಚಾರಣಾ ನ್ಯಾಯಾಲಯಗಳಲ್ಲಿ ಯಾವ ಯಾವ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂಬ ಮಾಹಿತಿಯನ್ನು ನಾಲ್ಕು ವಾರಗಳಲ್ಲಿ ನೀಡಿ’ ಎಂದಿತು.
ಕಾನೂನಿನಲ್ಲಿ ಈಗಾಗಲೇ ಇರುವ ‘ಅಂಗವಿಕಲ ವ್ಯಕ್ತಿ’ ಎನ್ನುವ ಅರ್ಥವಿವರಣೆಯನ್ನು ವಿಸ್ತರಿಸಬೇಕು ಎಂದು ಕೋರಿ ಆ್ಯಸಿಡ್ ದಾಳಿಯ ಸಂತ್ರಸ್ತೆ ಶಾಹೀನ್ ಮಲ್ಲಿಕ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಬಲವಂತದಿಂದ ಆ್ಯಸಿಡ್ ಕುಡಿಸಿದ ಪ್ರಕರಣಗಳ ಸಂತ್ರಸ್ತರನ್ನೂ ‘ಅಂಗವಿಕಲ ವ್ಯಕ್ತಿ’ ಎನ್ನುವ ಅರ್ಥ ವಿವರಣೆಯಲ್ಲಿ ಒಳಗೊಳ್ಳಬೇಕು. ಆ್ಯಸಿಡ್ ದಾಳಿಯ ಸಂತ್ರಸ್ತರಿಗೆ ಸೂಕ್ತ ಪರಿಹಾರ, ವೈದ್ಯಕೀಯ ಸೌಕರ್ಯ ಸೇರಿ ಹಲವು ಸೌಲಭ್ಯ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.