ನವದೆಹಲಿ: ಸಂಸದ ಕಾರ್ತಿ ಪಿ. ಚಿದಂಬರಂ ಅವರು ವಿದೇಶ ಪ್ರವಾಸಕ್ಕೆ ತೆರಳಲು, ನ್ಯಾಯಾಲಯದ ಸೂಚನೆಯಂತೆ 2022ರಲ್ಲಿ ಇರಿಸಿದ್ದ ₹1 ಕೋಟಿ ಭದ್ರತಾ ಠೇವಣಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.
ಏರ್‌ಸೆಲ್–ಮ್ಯಾಕ್ಸಿಸ್ ಹಾಗೂ ಐಎನ್‌ಎಕ್ಸ್ ಮೀಡಿಯಾ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕಾರ್ತಿ ಅವರು ಆರೋಪಿಯಾಗಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಕಾರ್ತಿ ಅವರು ವಿದೇಶಕ್ಕೆ ತೆರಳಲು ಅನುಮತಿ ನೀಡಲು ₹1 ಕೋಟಿ ಮೊತ್ತದ ಭದ್ರತಾ ಠೇವಣಿ ಇಡುವಂತೆ ನ್ಯಾಯಾಲಯ 2022ರಲ್ಲಿ ಷರತ್ತು ವಿಧಿಸಿತ್ತು.
ಅದರಂತೆ ಠೇವಣಿ ಇರಿಸಿ, ಬಳಿಕ ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಕಾರ್ತಿ ಅವರು ನಿಯಮದಂತೆ ತಮ್ಮ ಪಾಸ್‌ಪೋರ್ಟ್ ಅನ್ನು ತನಿಖಾಧಿಕಾರಿಗಳಿಗೆ ಹಸ್ತಾಂತರಿಸಿದ್ದರು.
ತಮ್ಮ ಠೇವಣಿಯನ್ನು ಹಿಂದಿರುಗಿಸುವಂತೆ 2023ರಲ್ಲಿ ಕಾರ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಉಜ್ಜಲ್ ಭುಯಾನ್ ಹಾಗೂ ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು, ಬಡ್ಡಿಸಹಿತ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲು ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.