ADVERTISEMENT

ಚರ್ಮದಿಂದ ಚರ್ಮ ಸ್ಪರ್ಶ ಪ್ರಕರಣ: ಬಾಂಬೆ ಹೈಕೋರ್ಟ್ ತೀರ್ಪು ರದ್ದು ಮಾಡಿದ ಸುಪ್ರೀಂ

ಪಿಟಿಐ
Published 18 ನವೆಂಬರ್ 2021, 8:28 IST
Last Updated 18 ನವೆಂಬರ್ 2021, 8:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆರೋಪಿ ಮತ್ತು ಸಂತ್ರಸ್ತರ ನಡುವೆ ನೇರವಾಗಿ ‘ಚರ್ಮದಿಂದ ಚರ್ಮದ ಸ್ಪರ್ಶ’ ಆಗಿಲ್ಲದಿದ್ದರೆ, ಅದು ‘ಪೋಕ್ಸೊ’ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂಬ ಬಾಂಬೆ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.

ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ಉದ್ದೇಶಕ್ಕಾಗಿ ‘ಪೋಕ್ಸೊ’ (ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣಾ ಕಾಯ್ದೆ) ರೂಪಿಸಲಾಗಿದೆಯೇ ಹೊರತು, ಮಗುವಿನೊಂದಿಗೆ ಚರ್ಮದಿಂದ ಚರ್ಮ ಸ್ಪರ್ಶವಾಗಿದೆಯೇ ಎಂಬುದಕ್ಕಲ್ಲ ಎಂದು ಹೇಳಿತು.

ಅಪರಾಧಿಯನ್ನು ಕಾನೂನಿನ ಜಾಲಗಳಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವುದು ಕಾನೂನಿನ ಉದ್ದೇಶವಲ್ಲ ಎಂದು ನ್ಯಾಯಪೀಠ ತಿಳಿಸಿತು.

ADVERTISEMENT

‘ಶಾಸಕಾಂಗವು ಸ್ಪಷ್ಟ ಉದ್ದೇಶವನ್ನು ವ್ಯಕ್ತಪಡಿಸಿದಾಗ, ನ್ಯಾಯಾಲಯಗಳು ನಿಬಂಧನೆಯಲ್ಲಿ ಅಸ್ಪಷ್ಟತೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ನಾವು ಭಾವಿಸಿದ್ದೇವೆ. ಅಸ್ಪಷ್ಟತೆಯನ್ನು ಸೃಷ್ಟಿಸುವಲ್ಲಿ ನ್ಯಾಯಾಲಯಗಳು ಅತಿಯಾದ ಉತ್ಸಾಹ ತೋರಬಾರದು’ ಎಂದು ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೂ ಒಳಗೊಂಡ ಪೀಠ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ‌ಅಟಾರ್ನಿ ಜನರಲ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ಪೋಕ್ಸೊ ಕಾಯ್ದೆಯಡಿ ಆರೋಪಿಯೊಬ್ಬರನ್ನು ಖುಲಾಸೆಗೊಳಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಜನವರಿ 27ರಂದು ತಡೆಯಾಜ್ಞೆ ನೀಡಿತ್ತು.

ಪೋಕ್ಸೊ ಕಾಯ್ದೆ ಮತ್ತು ಐಪಿಸಿ ಕಲಂ 354ರ ಅಡಿಯಲ್ಲಿ ವ್ಯಕ್ತಿಯೊಬ್ಬನಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಸೆಷನ್ಸ್ ನ್ಯಾಯಾಲಯ ವಿಧಿಸಿತ್ತು. ಈ ಕುರಿತು ಬಾಂಬೆ ಹೈಕೋರ್ಟ್‌ನಲ್ಲಿ ಆರೋಪಿ ಮೇಲ್ಮನವಿ ಸಲ್ಲಿಸಿದ್ದರು. ಐಪಿಸಿ ಕಲಂ 354ರ ಅಡಿಯಲ್ಲಿ ಆರೋಪಿಗೆ ನೀಡಿದ್ದ ಶಿಕ್ಷೆಯನ್ನು ಎತ್ತಿಹಿಡಿದಿದ್ದಹೈಕೋರ್ಟ್‌, ಪೋಕ್ಸೊ ಕಾಯ್ದೆಯಡಿಯ ಪ್ರಕರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.