ADVERTISEMENT

ಆಯ್ಕೆ ಸಮಿತಿ ಅನುಮತಿ ಪಡೆಯಲು ಕಷ್ಟವಿತ್ತೇ: ಸರ್ಕಾರಕ್ಕೆ ‘ಸುಪ್ರೀಂ’ ಪ್ರಶ್ನೆ

ಸಿಬಿಐ ನಿರ್ದೇಶಕರಿಗೆ ರಜೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 20:15 IST
Last Updated 6 ಡಿಸೆಂಬರ್ 2018, 20:15 IST
   

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ದಿಢೀರ್‌ ಎಂದು ದೀರ್ಘ ರಜೆಯ ಮೇಲೆ ಕಳುಹಿಸಲು ಕಾರಣಗಳೇನು ಎಂದು ಕೇಂದ್ರ ಸರ್ಕಾರ ಮತ್ತು ಕೇಂದ್ರ ಜಾಗೃತಿ ಆಯೋಗವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಈ ಕ್ರಮದ ವಿರುದ್ಧ ವರ್ಮಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್‌ ಈ ಪ್ರಶ್ನೆ ಎತ್ತಿದೆ. ಪ್ರಕರಣದ ವಿಚಾರಣೆ ಮುಗಿದಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ.

ಕೋರ್ಟ್‌ ಕೇಳಿದ್ದು...

* ಸಿಬಿಐ ಅಧಿಕಾರಿಗಳ ಮಧ್ಯೆ ಜುಲೈನಿಂದಲೇ ಆಂತರಿಕ ಕಲಹವಿತ್ತು ಎಂದು ಹೇಳುತ್ತಿದ್ದೀರಿ. ಆದರೆ ನೀವು ಕ್ರಮ ತೆಗೆದುಕೊಂಡದ್ದು ಅಕ್ಟೋಬರ್‌ನಲ್ಲಿ. ಅಕ್ಟೋಬರ್‌ವರೆಗೂ ಅದನ್ನು ನೀವು ಸಹಿಸಿಕೊಂಡಿದ್ದಿರಿ. ಹಾಗಿದ್ದ ಮೇಲೆ ದಿಢೀರ್ ಎಂದು ಮಧ್ಯರಾತ್ರಿ ಕ್ರಮ ತೆಗೆದುಕೊಳ್ಳುವ ಮುನ್ನ ಆಯ್ಕೆ ಸಮಿತಿಯ ಅನುಮತಿ ಪಡೆಯಲು ನಿಮಗೆ ಕಷ್ಟವೇನಿತ್ತು?

ADVERTISEMENT

* ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಂಡ ಆಯ್ಕೆ ಸಮಿತಿ ಸಿಬಿಐ ನಿರ್ದೇಶಕರನ್ನು ನೇಮಕ ಮಾಡಿತ್ತು. ಆ ಅಧಿಕಾರಿಯ ಅಧಿಕಾರವನ್ನು ವಾಪಸ್ ಪಡೆಯುವ ಮುನ್ನ ಆ ಸಮಿತಿಯ ಅನುಮತಿ ಪಡೆಯುವುದು ಒಳ್ಳೆಯದಲ್ಲವೇ? ಸರ್ಕಾರದ ಎಲ್ಲಾ ಕ್ರಮಗಳೂ ಸರಿಯಾಗಿಯೇ ಇರಬೇಕಲ್ಲವೇ?

* ಎಂತಹದ್ದೇ ತುರ್ತಿನ ಸಂದರ್ಭವಿದ್ದರೂ ಆಯ್ಕೆ ಸಮಿತಿಯ ಮೊರೆ ಹೋಗುವುದೇ ಸೂಕ್ತ

‘ತುರ್ತುಸ್ಥಿತಿಯಿತ್ತು’

ಅಸಾಮಾನ್ಯ ಪರಿಸ್ಥಿತಿಯಲ್ಲಿ ಅಸಾಮಾನ್ಯವಾದ ಕ್ರಮಗಳನ್ನೇ ತೆಗೆದುಕೊಳ್ಳಬೇಕಾಗುತ್ತದೆ. ಅಸಾಮಾನ್ಯ ಪರಿಸ್ಥಿತಿ ನಿರ್ವಹಿಸಲು ಕಾನೂನು–ನಿಯಮಗಳು ನೆರವಾಗುವುದಿಲ್ಲ. ಈ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧವೂ ಒಂದೇ ತೆರನಾದ ಕ್ರಮ ತೆಗೆದುಕೊಳ್ಳಲಾಗಿದೆ. ಇಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.ದೂರುಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಅಲೋಕ್ ವರ್ಮಾ ಅವರು ಜಾಗೃತ ಆಯೋಗಕ್ಕೆ ಸಲ್ಲಿಸದೆ, ಹಲವು ತಿಂಗಳಿಂದ ತಮ್ಮ ಬಳಿಯೇ ಇರಿಸಿಕೊಂಡಿದ್ದರು. ಈ ವಿಚಾರದಲ್ಲಿ ಜಾಗೃತ ಆಯೋಗವು ಕೈಕಟ್ಟಿ ಕುಳಿತುಕೊಳ್ಳುವಂತಿರಲಿಲ್ಲ. ಆಯೋಗವು ನಿಷ್ಪಕ್ಷಪಾತವಾಗೇ ಕ್ರಮ ತೆಗೆದುಕೊಂಡಿದೆ

- ತುಶಾರ್ ಮೆಹ್ತಾ, ಸಾಲಿಸಿಟರ್ ಜನರಲ್, ಕೇಂದ್ರ ಸರ್ಕಾರದ ಪರ ವಾದ

‘ಎಫ್‌ಐಆರ್ ಕಾರಣ’

ಆಂತರಿಕ ಕಲಹವಿದ್ದರೂ ಹಲವು ತಿಂಗಳು ಸರ್ಕಾರ ಸುಮ್ಮನೇ ಕುಳಿತಿತ್ತು. ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧ ಅಕ್ಟೋಬರ್ 15ರಂದು ಎಫ್‌ಐಆರ್ ದಾಖಲಾಯಿತು. ಅಲೋಕ್ ವರ್ಮಾ ವಿರುದ್ಧ ದಿಢೀರ್ ಎಂದು ಕ್ರಮ ತೆಗೆದುಕೊಳ್ಳಲು ಇದೇ ಪ್ರಧಾನ ಕಾರಣ.

- ಎಫ್‌.ಎಸ್‌.ನಾರಿಮನ್, ಅಲೋಕ್ ವರ್ಮಾ ಪರ ವಕೀಲ

‘ಕಾಣದ್ದು ಏನೋ ಇದೆ’

ಸರ್ಕಾರ ಹೇಳುತ್ತಿರುವಂತೆ ತುರ್ತುಸ್ಥಿತಿಯೇನೂ ಇರಲಿಲ್ಲ. ಇಬ್ಬರು ಅಧಿಕಾರಿಗಳವಿರುದ್ಧ ದೂರು ದಾಖಲಾದದ್ದು ಆಗಸ್ಟ್‌ನಲ್ಲಿ. ಆದರೆ ಸರ್ಕಾರ ಕ್ರಮತೆಗೆದುಕೊಂಡದ್ದು ಅಕ್ಟೋಬರ್‌ನಲ್ಲಿ. ಅಲೋಕ್ ವರ್ಮಾ ಅವರು ಯಾವುದೋ ಒಂದು ಕ್ರಮ ತೆಗೆದುಕೊಳ್ಳದಂತೆ ತಡೆಯುವ ಸಲುವಾಗಿ ಅವರ ಅಧಿಕಾರಿವನ್ನುಸರ್ಕಾರ ಕಿತ್ತುಕೊಂಡಿದೆ. ಈ ಪ್ರಕರಣದಲ್ಲಿ ಕಣ್ಣಿಗೆ ಕಾಣದೇ ಇರುವುದು ಏನೋ ಇದೆ

- ದುಶ್ಯಂತ್ ದವೆ, ಸರ್ಕಾರದ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ‘ಕಾಮನ್ ಕಾಸ್’ ಎನ್‌ಜಿಒ ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.