ADVERTISEMENT

ನಗದು ಪತ್ತೆ ಪ್ರಕರಣ: ನ್ಯಾಯಮೂರ್ತಿ ಯಶವಂತ ವರ್ಮಾಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಪಿಟಿಐ
Published 28 ಜುಲೈ 2025, 14:22 IST
Last Updated 28 ಜುಲೈ 2025, 14:22 IST
ಯಶವಂತ ವರ್ಮಾ
ಯಶವಂತ ವರ್ಮಾ   

ನವದೆಹಲಿ: ಮನೆಯಲ್ಲಿ ನಗದು ಪತ್ತೆಯಾದ ಪ್ರಕರಣದಲ್ಲಿ ತಮ್ಮನ್ನು ಅಪರಾಧಿಯಾಗಿಸಿ ಸುಪ್ರೀಂ ಕೋರ್ಟ್‌ನ ಆಂತರಿಕ ತನಿಖಾ ಸಮಿತಿಯು ನೀಡಿರುವ ವರದಿಯನ್ನು ಅಮಾನ್ಯ ಮಾಡಬೇಕು ಎಂದು ಕೋರಿದ್ದ ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಶ್ನಿಸಿತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ, ಎ.ಜಿ.ಮಸೀಹ್‌ ಅವರ ನೇತೃತ್ವದ ನ್ಯಾಯಪೀಠವು, ‘ತನಿಖಾ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗಿದ್ದೇಕೆ? ಆ ವಿಡಿಯೊವನ್ನು ತೆಗೆದುಹಾಕಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವಿರಾ? ತನಿಖೆಯು ಪೂರ್ಣಗೊಂಡು, ವರದಿ ಬಿಡುಗಡೆ ಮಾಡುವವರೆಗೆ ಕಾದಿದ್ದೇಕೆ? ನಿಮ್ಮ ಪರವಾಗಿಯೇ ವರದಿ ಬರುತ್ತದೆಂಬ ನಿರೀಕ್ಷೆ ಇತ್ತಾ’ ಎಂದು ವರ್ಮಾ ಪರ ವಕೀಲ ಕಪಿಲ್‌ ಸಿಬಲ್‌ ಅವರನ್ನು ಪ್ರಶ್ನಿಸಿತು.

ನ್ಯಾ. ವರ್ಮಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಹಲವು ನ್ಯೂನತೆಗಳಿವೆ ಎಂದು ವಿಚಾರಣೆ ವೇಳೆ ಹೇಳಿತು.

ADVERTISEMENT

ಅರ್ಜಿಯೊಂದಿಗೆ ಆಂತರಿಕ ತನಿಖಾ ಸಮಿತಿಯ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಸೂಚಿಸಿತು.

‘ಪ್ರಕ್ರಿಯೆಯು ಸಂವಿಧಾನದ 124ನೇ ವಿಧಿಯಡಿಯಲ್ಲಿ ನಡೆಯಬೇಕು ಮತ್ತು ನ್ಯಾಯಮೂರ್ತಿಯೊಬ್ಬರು ಸಾರ್ವಜನಿಕ ಚರ್ಚೆಯ ವಿಷಯವಾಗಲು ಸಾಧ್ಯವಿಲ್ಲ’ ಎಂದು ಸಿಬಲ್‌ ಅವರು ತಿಳಿಸಿದರು.

‘ಸಂವಿಧಾನದ ಪ್ರಕಾರ ನ್ಯಾಯಮೂರ್ತಿಗಳ ವಿರುದ್ಧ ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ವಿಡಿಯೊ ಬಿಡುಗಡೆ ಮಾಡುವುದು, ಸಾರ್ವಜನಿಕ ನಿಂದನೆ ಮಾಡುವುದು, ಮಾಧ್ಯಮಗಳಲ್ಲಿ ಆರೋಪ ಮಾಡುವುದು ನಿಷಿದ್ಧ’ ಎಂದು ಹೇಳಿದರು.

ನಂತರ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿತು.

‘ಸಂಸತ್ತಿನಲ್ಲಿ ವರ್ಮಾ ಅವರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ನಡೆಸಬೇಕು’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂಜೀವ್‌ ಖನ್ನಾ ಅವರು ಮೇ 8ರಂದು ಶಿಫಾರಸು ಮಾಡಿದ್ದರು. ಇದನ್ನು ರದ್ದು ಮಾಡಬೇಕು ಎಂದು ವರ್ಮಾ ಕೋರಿದ್ದಾರೆ. 

‘ಅದಾಗಲೇ ನನ್ನ ವಿರುದ್ಧ ರೂಪಿತವಾದ ಸಂಕಥನದ ಅಭಿಪ್ರಾಯದಲ್ಲಿಯೇ ಸಮಿತಿಯು ತನಿಖೆ ನಡೆಸಿದೆ. ತನಿಖೆಯನ್ನು ಬೇಗ ಮುಗಿಸಬೇಕು ಎನ್ನುವ ಕಾರಣಕ್ಕಾಗಿ ಬೇಗ ಮುಗಿಸಲಾಗಿದೆಯೇ ಹೊರತು ನ್ಯಾಯಯುತವಾಗಿ ಅದು ನಡೆದಿಲ್ಲ. ಸಮಿತಿಯು ನನ್ನ ವಾದವನ್ನು ಆಲಿಸಿಲ್ಲ’ ಎಂದು ವರ್ಮಾ ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.