ADVERTISEMENT

ವಿಶೇಷ ನ್ಯಾಯಾಲಯ ಸ್ಥಾಪನೆ: ಕೇಂದ್ರಕ್ಕೆ ‘ಸುಪ್ರೀಂ’ ತರಾಟೆ

ಪಿಟಿಐ
Published 18 ಜುಲೈ 2025, 15:21 IST
Last Updated 18 ಜುಲೈ 2025, 15:21 IST
   

ನವದೆಹಲಿ: ವಿಶೇಷ ಕಾಯ್ದೆಗಳಡಿ ದಾಖಲಾದ ಪ್ರಕರಣಗಳ ವಿಚಾರಣೆಗೆ ತ್ವರಿತವಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸದ ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ‘ಎನ್‌ಐಎ ಕಾಯ್ದೆ ಮತ್ತು ಇತರ ವಿಶೇಷ ಕಾಯ್ದೆಗಳಡಿ ತ್ವರಿತವಾಗಿ ವಿಚಾರಣೆ ನಡೆಸಲು ಅಗತ್ಯ ಮೂಲಸೌಕರ್ಯಗಳೊಂದಿಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಲ್ಲಿ ಸಂಬಂಧಪಟ್ಟ ಪ್ರಾಧಿಕಾರವು ವಿಫಲವಾದಾಗ, ಶೀಘ್ರವಾಗಿ ವಿಚಾರಣೆ ಪೂರ್ಣಗೊಳಿಸಲು ಸಾಧ್ಯ ಆಗದಿರುವುದರಿಂದ, ವಿಚಾರಣಾ ನ್ಯಾಯಾಲಯಗಳು ಆರೋಪಿಗಳಿಗೆ ಜಾಮೀನು ನೀಡಬೇಕು’ ಎಂದು ಆದೇಶಿಸಿದೆ.

ನಕ್ಸಲ್‌ ಪರ ಸಹಾನುಭೂತಿ ಹೊಂದಿದ್ದಾರೆ ಎಂಬ ಆರೋಪ ಹೊತ್ತಿರುವ ಮಹಾರಾಷ್ಟ್ರದ ಗಡ್‌ಚಿರೋಲಿಯ ಕೈಲಾಶ್‌ ರಾಮಚಂದಾನಿ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ನ್ಯಾಯಪೀಠವು ಈ ಆದೇಶ ಹೊರಡಿಸಿದೆ.

ADVERTISEMENT

ಈ ಹಿಂದೆಯೂ ಜಾಮೀನು ಅರ್ಜಿ ತಿರಸ್ಕರಿಸಿದ್ದನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌, ‘ಎನ್‌ಐಎ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾದರೆ, ಮುಂದಿನ ವಿಚಾರಣೆಯಲ್ಲೇ ಈ ಅರ್ಜಿಯನ್ನು ಪರಿಗಣಿಸಬೇಕು’ ಎಂದಿದೆ.

ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಕೊನೆಯ ಅವಕಾಶ ನೀಡಲಾಗಿದೆ ಎಂದ ನ್ಯಾಯಪೀಠವು, ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.