ADVERTISEMENT

ಉಜ್ಜಯಿನಿ: ವಿಐಪಿ ದರ್ಶನವು ಧಾರ್ಮಿಕ ಆಚರಣೆ; ಸುಪ್ರೀಂ ಕೋರ್ಟ್‌

ಉಜ್ಜಯಿನಿ: ವಿಐಪಿ ದರ್ಶನಕ್ಕೆ ಅವಕಾಶ ನೀಡಬಾರದು ಎಂಬ ಅರ್ಜಿಯ ವಿಚಾರಣೆ ನಿರಾಕರಿಸಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 16:05 IST
Last Updated 27 ಜನವರಿ 2026, 16:05 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ (ಪಿಟಿಐ): ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಲು ‘ವಿಐಪಿ ದರ್ಶನ’ ಮತ್ತು ‘ಆದ್ಯತೆ ಮೇರೆಗೆ ಪ್ರವೇಶ’ ನೀಡುವ ಸಂಪ್ರದಾಯವನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತು. ‘ಇದು ಧಾರ್ಮಿಕ ಆಚರಣೆಯ ವಿಚಾರ. ಇದರಲ್ಲಿ ನ್ಯಾಯ ತೀರ್ಮಾನ ಸಾಧ್ಯವಿಲ್ಲ’ ಎಂದಿತು.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್‌ ಮತ್ತು ನ್ಯಾಯಮೂರ್ತಿಗಳಾದ ಆರ್‌. ಮಹದೇವನ್‌ ಹಾಗೂ ಜಾಯ್‌ ಮಾಲ್ಯಾ ಬಾಗ್ಚಿ ಅವರ ಪೀಠ ಮಂಗಳವಾರ ಈ ರೀತಿ ಅಭಿಪ್ರಾಯಪಟ್ಟಿತು. ವಕೀಲ ವಿಷ್ಣು ಶಂಕರ್‌ ಜೈನ್‌ ಅವರು ಅರ್ಜಿ ಸಲ್ಲಿಸಿದ್ದರು. ‘ಈ ವಿಚಾರದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುತ್ತೇನೆ’ ಎಂದು ಜೈನ್‌ ಅವರು ತಮ್ಮ ಅರ್ಜಿಯನ್ನು ವಾಪಸು ಪಡೆದರು.

‘ದೇವಸ್ಥಾನದ ನಿರ್ವಹಣೆ ವಿಚಾರಗಳಿಗೆ ಸಂಬಂಧಿಸಿ ನ್ಯಾಯಾಂಗದ ಮಧ್ಯಪ್ರವೇಶಕ್ಕೆ ಮಿತಿ ಇದೆ. ಇದು ಜನರಿಗೆ ಬಿಟ್ಟ ವಿಚಾರ. ವಿಐಪಿ ದರ್ಶನ ನೀಡಬೇಕೆ? ಬೇಡವೇ ಎನ್ನುವುದನ್ನು ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಷ್ಟೆ’ ಎಂದು ಸಿಜೆಐ ಸೂರ್ಯ ಕಾಂತ್‌ ಹೇಳಿದರು.

ADVERTISEMENT

‘ವಿಐಪಿ ಎಂದರೆ ಏನು ಎನ್ನುವುದನ್ನು ಯಾವುದೇ ಕಾಯ್ದೆ ಅಥವಾ ನಿಯಮಗಳಲ್ಲಿ ವಿವರಿಸಿಲ್ಲ. ಇದೊಂದು ಆಡಳಿತಾತ್ಮಕ ವಿಚಾರ. ದೇವಸ್ಥಾನದ ಆಡಳಿತ ಮಂಡಳಿ ಮತ್ತು ಜಿಲ್ಲಾಧಿಕಾರಿ ಇದನ್ನು ನಿರ್ವಹಿಸುತ್ತಾರೆ’ ಎಂದು ಹೇಳಿದ್ದ ಮಧ್ಯಪ್ರದೇಶ ಹೈಕೋರ್ಟ್‌ ಇದೇ ಕೋರಿಕೆಯುಳ್ಳ ಅರ್ಜಿಯನ್ನು ವಜಾ ಮಾಡಿತ್ತು. ಬಳಿಕ, ವಕೀಲ ಜೈನ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.