ADVERTISEMENT

SIR: ಪಶ್ಚಿಮ ಬಂಗಾಳದ ಆಕ್ಷೇಪಣೆ ಪುರಸ್ಕರಿಸಲು ಸುಪ್ರೀಂ ಕೋರ್ಟ್‌ ನಕಾರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 13:51 IST
Last Updated 27 ಫೆಬ್ರುವರಿ 2026, 13:51 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ‘ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಭಾಗವಾಗಿ ಸಲ್ಲಿಕೆಯಾಗಿರುವ 50 ಲಕ್ಷ ದೂರುಗಳು ಮತ್ತು ಆಕ್ಷೇಪಗಳ ವಿಚಾರಣೆಗಾಗಿ ನಿಯೋಜಿಸಲಾದ ಸಿವಿಲ್ ನ್ಯಾಯಾಧೀಶರು ಯಾರಿಂದಲೂ ಪ್ರಭಾವಕ್ಕೆ ಒಳಗಾಗುವುದಿಲ್ಲ’ ಎಂದು ಸು‍‍ಪ್ರೀಂ ಕೋರ್ಟ್‌ ತಿಳಿಸಿದೆ.

ನ್ಯಾಯಾಧೀಶರಿಗೆ ಚುನಾವಣಾ ಆಯೋಗವು ಹಮ್ಮಿಕೊಂಡಿದ್ದ ತರಬೇತಿ ಕುರಿತು ಆಕ್ಷೇಪಣೆ ಸಲ್ಲಿಸಿದ್ದ ಪಶ್ಚಿಮ ಬಂಗಾಳದ ಅರ್ಜಿಯನ್ನು ಪುರಸ್ಕರಿಸಲು ಇದೇ ವೇಳೆ ನಿರಾಕರಿಸಿದೆ.

ADVERTISEMENT

ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಾಗಿದ್ದ ಕಪಿಲ್‌ ಸಿಬಲ್‌, ‘ಏನೋ ವಿಚಿತ್ರವಾದುದು ಸಂಭವಿಸಿದೆ.  ಸುಪ್ರೀಂ ಕೋರ್ಟ್‌ ನೀಡಿದ ಆದೇಶದಂತೆ ಕಲ್ಕತ್ತ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಎಸ್‌ಐಆರ್‌ ಆಕ್ಷೇಪಣೆ ವಿಚಾರಿಸಲು ನ್ಯಾಯಾಧೀಶರನ್ನು ನಿಯೋಜಿಸಿದ್ದಾರೆ. ಆದರೆ ಹಿಂಬಾಗಿಲಿನಲ್ಲಿ ನ್ಯಾಯಾಂಗ ಅಧಿಕಾರಿಗಳಿಗೆ  ಚುನಾವಣಾ ಆಯೋಗವು ತರಬೇತಿಯ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಯಾವ ದಾಖಲೆಗಳನ್ನು ಸ್ವೀಕರಿಸಬೇಕು, ಯಾವುದನ್ನು ಸ್ವೀಕರಿಸಬಾರದು’ ಎಂದು ತಿಳಿಸಿದೆ’ ಎಂದು ನ್ಯಾಯಪೀಠದ ಗಮನಸೆಳೆದರು. 

‘ಈ ಕುರಿತು ನ್ಯಾಯಾಂಗ ಅಧಿಕಾರಿಗಳೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇದು ಇಲ್ಲಿಗೆ ಕೊನೆಯಾಗಬೇಕು. ನ್ಯಾಯಾಂಗ ಅಧಿಕಾರಿಗಳು ಯಾರಿಂದಲೂ ಪ್ರಭಾವಿತರಾಗಲು ಸಾಧ್ಯವಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ತಿಳಿಸಿದರು.

‘ನಮ್ಮ ಆದೇಶವು ಸೂರ್ಯಸ್ಪಷ್ಟವಾಗಿದೆ’ ಎಂದು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ತಿಳಿಸಿದರು.

‘ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಮೀರಿ ರಾಜ್ಯ ಸರ್ಕಾರವಾಗಲೀ, ಚುನಾವಣಾ ಆಯೋಗವಾಗಲೀ ನಡೆಯಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.