ADVERTISEMENT

ಟ್ರ್ಯಾಕ್ಟರ್ ರ್‍ಯಾಲಿ ಟ್ವೀಟ್‌: ಶಶಿ ತರೂರ್, ಪತ್ರಕರ್ತರ ಬಂಧನಕ್ಕೆ ಸುಪ್ರೀಂ ತಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2021, 7:25 IST
Last Updated 9 ಫೆಬ್ರುವರಿ 2021, 7:25 IST
ಶಶಿ ತರೂರ್ (ಪಿಟಿಐ ಸಂಗ್ರಹ ಚಿತ್ರ)
ಶಶಿ ತರೂರ್ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ: ಗಣರಾಜ್ಯೋತ್ಸವ ದಿನ ನಡೆದ ಟ್ರ್ಯಾಕ್ಟರ್‌ ರ್‍ಯಾಲಿ ಕುರಿತು ಟ್ವೀಟ್ ಮಾಡಿರುವ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಹಿರಿಯ ಪತ್ರಕರ್ತರ ಬಂಧನಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.

ಟ್ರ್ಯಾಕ್ಟರ್ ರ್‍ಯಾಲಿ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟ ವಿಚಾರವಾಗಿ ದೃಢಪಡದ ಸುದ್ದಿಯನ್ನು ಹಂಚಿಕೊಂಡದ್ದಕ್ಕೆ ಸಂಬಂಧಿಸಿ ಶಶಿ ತರೂರ್ ಮತ್ತು ಕೆಲ ಹಿರಿಯ ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

ಜನವರಿ 26ರಂದು ರೈತರು ದೆಹಲಿಗೆ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್‍ಯಾಲಿ ಹಿಂಸಾಚಾರಕ್ಕೆ ತಿರುಗಿತ್ತು. ಆ ಸಂದರ್ಭ ಮೃತಪಟ್ಟಿದ್ದ ಯುವಕನೋರ್ವನ ಸಾವಿಗೆ ಸಂಬಂಧಿಸಿ ತರೂರ್‌ ಹಾಗೂ ಇತರರು ಟ್ವೀಟ್ ಮಾಡಿದ್ದರು. ಮೃತ ಯುವಕ ಆಸ್ಟ್ರೇಲಿಯಾದಿಂದ ತವರಿಗೆ ಮರಳಿದ್ದ ವಿದ್ಯಾರ್ಥಿ ಎಂಬುದು ಬಳಿಕ ತಿಳಿದುಬಂದಿತ್ತು.

ತರೂರ್‌, ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ, ನ್ಯಾಷನಲ್‌ ಹೆರಾಲ್ಡ್‌ನ ಮ್ರಿಣಾಲ್‌ ಪಾಂಡೆ‌ ಪಾಂಡೆ, ಕೌಮಿ ಆವಾಜ್‌ನ ಜಾಫರ್ ಆಘಾ, ದಿ ಕ್ಯಾರವನ್‌ ಸುದ್ದಿ ಸಮೂಹದ ಅನಂತ್‌ ನಾಥ್‌ ಮತ್ತು ವಿನೋದ್‌ ಜೋಶ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ಸೆಕ್ಷನ್ 124 ಎ (ದೇಶದ್ರೋಹ), 153-ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಕೃತ್ಯ), ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಸೆಕ್ಷನ್ 120ಬಿ (ಮರಣದಂಡನೆ ಶಿಕ್ಷೆ ವಿಧಿಸುವ ಅಪರಾಧಕ್ಕೆ ಅಪರಾಧ ಸಂಚು).ಸೇರಿದಂತೆ 11 ಐಪಿಸಿ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.