ADVERTISEMENT

ಮೀಸಲು ಮೂಲಭೂತ ಹಕ್ಕಲ್ಲ: ಸುಪ್ರೀಂ ಕೋರ್ಟ್‌

ನೇಮಕಾತಿ, ಬಡ್ತಿಯಲ್ಲಿ ಮೀಸಲಾತಿ ರಾಜ್ಯದ ವಿವೇಚನಾಧಿಕಾರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 19:45 IST
Last Updated 7 ಫೆಬ್ರುವರಿ 2020, 19:45 IST
   

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯೋಗಿಗಳಿಗೆ ಬಡ್ತಿಯಲ್ಲಿ ರಾಜ್ಯ ಸರ್ಕಾರವು ಮೀಸಲಾತಿ ನೀಡಲೇಬೇಕು ಎಂದಿಲ್ಲ. ಅದು ರಾಜ್ಯ ಸರ್ಕಾರದ ವಿವೇಚನಾಧಿಕಾರ.ಮೀಸಲಾತಿಯು ಮೂಲಭೂತ ಹಕ್ಕು ಎಂದು ಯಾವುದೇ ವ್ಯಕ್ತಿ ಪ್ರತಿಪಾದಿಸುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ.

ಸರ್ಕಾರದ ಹುದ್ದೆಗಳಿಗೆ ನೇಮಕ ಮಾಡುವಾಗ ಮತ್ತು ಬಡ್ತಿ ನೀಡುವಾಗ ಮೀಸಲಾತಿ ಒದಗಿಸುವ ಅಗತ್ಯ ಇದೆಯೇ ಎಂಬುದನ್ನು ರಾಜ್ಯ ಸರ್ಕಾರ ನಿರ್ಧರಿಸಬಹುದು ಎಂದು ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರ ರಾವ್‌ ಮತ್ತು ಹೇಮಂತ್‌ ಗುಪ್ತಾ ಅವರ ಪೀಠವು ಶುಕ್ರವಾರ ಹೇಳಿದೆ.

‘ಈ ನ್ಯಾಯಾಲಯವು ಹಿಂದೆ ನೀಡಿದ್ದ ತೀರ್ಪುಗಳ ಪ್ರಕಾರ, ಮೀಸಲಾತಿ ನೀಡುವುದು ರಾಜ್ಯ ಸರ್ಕಾರಗಳ ಬದ್ಧತೆ ಅಲ್ಲ. ಈ ವಿಚಾರ
ದಲ್ಲಿ ಯಾವುದೇ ಗೊಂದಲ ಇಲ್ಲ. ಬಡ್ತಿಯಲ್ಲಿ ಮೀಸಲಾತಿ ಕೊಡಬೇಕು ಎಂಬುದು ವ್ಯಕ್ತಿಯ ಮೂಲಭೂತ ಹಕ್ಕು ಅಲ್ಲ. ಮೀಸಲಾತಿ ಒದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ನಿರ್ದೇಶನ ನೀಡುವುದು ಸಾಧ್ಯವಿಲ್ಲ’ ಎಂದು ಪೀಠವು ಹೇಳಿದೆ.

ADVERTISEMENT

ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ್ದ ತೀರ್ಪುಗಳ ಆಧಾರದಲ್ಲಿ ಈ ನಿಲುವಿಗೆ ಪೀಠವು ಬಂದಿದೆ. ಇಂದ್ರಾ ಸಾಹ್ನಿ (1992), ಎಂ. ನಾಗರಾಜ್‌ (2006), ಜರ್ನೈಲ್‌ ಸಿಂಗ್‌ (2018) ಮತ್ತು ಸುರೇಶ್‌ ಚಂದ್‌ ಗೌತಮ್‌ (2016) ಪ್ರಕರಣಗಳನ್ನು ಉಲ್ಲೇಖಿಸಿ ತೀರ್ಪು ನೀಡಲಾಗಿದೆ. ಬಡ್ತಿಯಲ್ಲಿ ಮೀಸಲಾತಿ ಒದಗಿಸಬೇಕು ಎಂದು ಉತ್ತರಾಖಂಡ ಹೈಕೋರ್ಟ್‌ 2019ರ ಜುಲೈ 15ರಂದು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದೆ.

ಸರ್ಕಾರದ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಜನರ ಪ್ರಾತಿನಿಧ್ಯ ಅಗತ್ಯ ಪ್ರಮಾಣದಲ್ಲಿ ಇಲ್ಲ ಎಂಬುದು ಸರ್ಕಾರದಅಭಿಪ್ರಾಯವಾಗಿದ್ದರೆ, ಈ ಸಮುದಾಯಗಳಿಗೆ ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ನೇಮಕಾತಿ ಮತ್ತು ಬಡ್ತಿಯಲ್ಲಿ ಮೀಸಲಾತಿ ನೀಡುವ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಂವಿಧಾನದ 16 (4) ಮತ್ತು 16 (4–ಎ) ವಿಧಿಗಳು ರಾಜ್ಯ ಸರ್ಕಾರಕ್ಕೆ ನೀಡುತ್ತವೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಉತ್ತರಾಖಂಡದ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಮುಂದೆ ನೇಮಿಸಿಕೊಳ್ಳಲಾಗುವ ಸಹಾಯಕ ಎಂಜಿನಿಯರ್‌ಗಳ ಎಲ್ಲ ಹುದ್ದೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರನ್ನೇ ಆಯ್ಕೆ ಮಾಡಬೇಕು ಎಂದೂ ಉತ್ತರಾಖಂಡ ಹೈಕೋರ್ಟ್‌ ಆದೇಶ ನೀಡಿತ್ತು. ಈ ಆದೇಶ ಸಮರ್ಥನೀಯ ಅಲ್ಲವೇ ಅಲ್ಲ ಎಂದು ಸುಪ್ರೀಂ ಕೋರ್ಟ್‌ನ ಪೀಠ ಹೇಳಿದೆ.

ಸರ್ಕಾರದ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರಾತಿನಿಧ್ಯವು ಬೇಕಾದ ಪ್ರಮಾಣದಲ್ಲಿ ಇದೆ ಎಂಬುದನ್ನು ದತ್ತಾಂಶ ಸಂಗ್ರಹದ ಮೂಲಕ ಮನವರಿಕೆ ಮಾಡಿಕೊಂಡಬಳಿಕ ಮಾತ್ರ ಮೀಸಲಾತಿ ನೀಡುವುದಿಲ್ಲ ಎಂದು ನಿರ್ಧರಿಸುವ ಅಧಿಕಾರ ರಾಜ್ಯಕ್ಕೆ ಇದೆ ಎಂದು ಉತ್ತರಾಖಂಡದ ಪರಿಶಿಷ್ಟ ಜಾತಿ/ಪಂಗಡಗಳ ನೌಕರರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು.

ದತ್ತಾಂಶ ಸಂಗ್ರಹ ಅನಗತ್ಯ

ಬಡ್ತಿಯಲ್ಲಿ ಮೀಸಲಾತಿ ನೀಡುವುದಿಲ್ಲ ಎಂಬ ನಿರ್ಧಾರವನ್ನು ಪ್ರಜ್ಞಾಪೂರ್ವಕವಾಗಿಯೇ ಉತ್ತರಾಖಂಡ ರಾಜ್ಯ ಸರ್ಕಾರ ಕೈಗೊಂಡಿದೆ. ಹಾಗಾಗಿ, ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರು ಅಗತ್ಯ ಪ್ರಮಾಣದಲ್ಲಿ ಇದ್ದಾರೆಯೇ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರವು ಸಂಗ್ರಹಿಸುವ ಅಗತ್ಯ ಇಲ್ಲ.

ಬಡ್ತಿಯಲ್ಲಿ ಮೀಸಲಾತಿ ನೀಡುವುದು ರಾಜ್ಯ ಸರ್ಕಾರದ ಹೊಣೆಗಾರಿಕೆ ಅಲ್ಲ. ಆದ್ದರಿಂದ ಸರ್ಕಾರಿ ಸೇವೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಪ್ರಾತಿನಿಧ್ಯ ಅಗತ್ಯ ಪ್ರಮಾಣದಲ್ಲಿ ಇದೆ ಎಂಬ ದಾಖಲೆಗಳನ್ನು ತೋರಿಸಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಅಗತ್ಯವೂ ರಾಜ್ಯಕ್ಕೆ ಇಲ್ಲ.

ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಜನರ ಪ್ರಾತಿನಿಧ್ಯ ಅಗತ್ಯ ಪ್ರಮಾಣದಲ್ಲಿ ಇಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರೂ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದೂ ನ್ಯಾಯಪೀಠ ಹೇಳಿದೆ.

ಪೀಠವು ಹೇಳಿದ್ದೇನು?

* ವಿಧಿ 16 (4) ಮತ್ತು (4 ಎ): ಪ್ರಾತಿನಿಧ್ಯ ಬೇಕಾದಷ್ಟು ಪ್ರಮಾಣದಲ್ಲಿ ಇದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುವುದು ರಾಜ್ಯ ಸರ್ಕಾರದ ಕೆಲಸ ಎಂದು ಸ್ಪಷ್ಟವಾಗಿ ಹೇಳುತ್ತದೆ

*ಆಯೋಗ ಅಥವಾ ಸಮಿತಿ, ವ್ಯಕ್ತಿ ಅಥವಾ ಪ್ರಾಧಿಕಾರದ ಮೂಲಕ ಸಂಗ್ರಹಿಸಿದ ದತ್ತಾಂಶದ ಆಧಾರದಲ್ಲಿ ರಾಜ್ಯವು ತನ್ನ ನಿಲುವನ್ನು ರೂಪಿಸಿಕೊಳ್ಳಬಹುದು

* ಸರ್ಕಾರದ ಹುದ್ದೆಗಳಲ್ಲಿ ನೀಡಿದ ಮೀಸಲಾತಿಯನ್ನು ಸಮರ್ಥಿಸಿಕೊಳ್ಳಲು ಪ್ರಾತಿನಿಧ್ಯದ ಕೊರತೆಯ ದತ್ತಾಂಶವನ್ನು ರಾಜ್ಯವು ಬಳಸಿಕೊಳ್ಳಬಹುದು

*ಪ್ರಾತಿನಿಧ್ಯ ಕೊರತೆಯ ದತ್ತಾಂಶವು ಮೀಸಲಾತಿ ನೀಡುವುದಕ್ಕೆ ಇರುವ ಸಮರ್ಥನೆ. ಮೀಸಲಾತಿ ನೀಡುವುದಿಲ್ಲ ಎಂದು ರಾಜ್ಯವು ನಿರ್ಧರಿಸಿದರೆ, ಇಂತಹ ದತ್ತಾಂಶವನ್ನು ಸರ್ಕಾರ ಸಂಗ್ರಹಿಸುವ ಅಗತ್ಯ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.