
ನವದೆಹಲಿ: ಹಂಗಾಮಿ ನ್ಯಾಯಮೂರ್ತಿಗಳಾಗಿ ನೇಮಕವಾಗುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಏಕಸದಸ್ಯ ಇಲ್ಲವೇ ವಿಭಾಗೀಯ ಪೀಠದ ನೇತೃತ್ವವಹಿಸಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ವಿಲೇವಾರಿ ಮಾಡುವುದಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ. ಈ ಸಂಬಂಧ, 2021ರಲ್ಲಿ ತಾನು ನೀಡಿದ್ದ ತೀರ್ಪಿನಲ್ಲಿ ಮಾರ್ಪಾಡು ಮಾಡಿದೆ.
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳನ್ನು ಹಂಗಾಮಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವ ಸಂಬಂಧ ಸದ್ಯ ಜಾರಿಯಲ್ಲಿರುವ ನೀತಿಯಲ್ಲಿ ತಿದ್ದುಪಡಿ ತರಬಹುದು ಇಲ್ಲವೇ ಸುಧಾರಣೆ ತರಬಹುದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಎಂ.ಪಾಂಚೋಲಿ ಅವರು ಇದ್ದ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ‘ಈ ಕುರಿತು ಆಂತರಿಕ ಸಮಾಲೋಚನೆ ಮೂಲಕ ಕ್ರಮ ಕೈಗೊಳ್ಳಬಹುದು. ಈ ಸಂಬಂಧ ಯಾವುದೇ ಆದೇಶ ಹೊರಡಿಸುವ ಅಗತ್ಯ ಇಲ್ಲ’ ಎಂದರು.
ಹೈಕೋರ್ಟ್‌ಗೆ ಮಂಜೂರಾದ ಒಟ್ಟು ಹುದ್ದೆಗಳ ಶೇ10ಕ್ಕಿಂತ ಹೆಚ್ಚು ಇರದಂತೆ, ಹಂಗಾಮಿ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದಕ್ಕೆ ಹೈಕೋರ್ಟ್‌ಗಳಿಗೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಜನವರಿ 30ರಂದು ಆದೇಶಿಸಿತ್ತು.
ನ್ಯಾಯಾಂಗ ಕ್ಷೇತ್ರದಲ್ಲಿ ಸಾಕಷ್ಟು ಜನ ಪ್ರತಿಭಾವಂತರಿದ್ದು 62 ವರ್ಷಕ್ಕೆ ನಿವೃತ್ತರಾಗುತ್ತಾರೆ. ಆದರೆ ಬಾಕಿ ಇರುವ ಪ್ರಕರಣಗಳ ವಿಲೇವಾರಿಗಾಗಿ ನಿವೃತ್ತರ ಸೇವೆಯನ್ನು ಬಳಸಿಕೊಳ್ಳಬಹುದುಸುಪ್ರೀಂ ಕೋರ್ಟ್
ನಿವೃತ್ತ ನ್ಯಾಯಮೂರ್ತಿಗಳು ಏಕಸದಸ್ಯ ಪೀಠದ ನೇತೃತ್ವವಹಿಸಿಕೊಳ್ಳಲು ಅವಕಾಶ ನೀಡಬೇಕು
ವಿಭಾಗೀಯ ಪೀಠವಿದ್ದಲ್ಲಿ ಅದರ ನೇತೃತ್ವವನ್ನು ನಿವೃತ್ತ ನ್ಯಾಯಮೂರ್ತಿಗಳಿಗೇ ವಹಿಸಬೇಕು
ಸಂದರ್ಭಕ್ಕೆ ಅನುಗುಣವಾಗಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ವಿಭಾಗೀಯ ಪೀಠ ರಚಿಸಬಹುದು.
ಈ ಪೀಠದಲ್ಲಿ ಒಬ್ಬರು ಹಾಲಿ ಹಾಗೂ ಒಬ್ಬರು ಹಂಗಾಮಿ ನ್ಯಾಯಮೂರ್ತಿ ಇರಬಹುದು ಇಲ್ಲವೇ ಇಬ್ಬರೂ ಹಂಗಾಮಿ ನ್ಯಾಯಮೂರ್ತಿಗಳು ಇರಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.