ADVERTISEMENT

ಕೋರ್ಟ್‌ ತೀರ್ಪುಗಳನ್ನು ಸಂಸತ್‌ ರದ್ದು ಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌

ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆಯ ಕೆಲ ಅವಕಾಶಗಳನ್ನು ರದ್ದುಗೊಳಿಸಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 0:30 IST
Last Updated 20 ನವೆಂಬರ್ 2025, 0:30 IST
–
   

ನವದೆಹಲಿ: ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆ–2021ರಲ್ಲಿನ ಪ್ರಮುಖ ಅವಕಾಶಗಳನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಪಡಿಸಿದೆ.

‘ಕೆಲ ಸಣ್ಣ ಬದಲಾವಣೆಗಳೊಂದಿಗೆ ಹೊಸ ಕಾಯ್ದೆ ರಚಿಸುವ ಮೂಲಕ, ನ್ಯಾಯಾಲಯ ನೀಡಿರುವ ತೀರ್ಪುಗಳನ್ನು ಸಂಸತ್‌ ರದ್ದುಗೊಳಿಸಲು ಸಾಧ್ಯವಿಲ್ಲ’ ಎಂದು ಕಟುವಾಗಿ ಹೇಳಿದೆ.

ನ್ಯಾಯಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ, ಅಧಿಕಾರಾವಧಿ, ಸೇವಾ ನಿಯಮಗಳಿಗೆ ಸಂಬಂಧಿಸಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆಯಲ್ಲಿನ ಅವಕಾಶಗಳನ್ನೇ ಕಾಯ್ದೆಯಲ್ಲಿ ಅಳವಡಿಸಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಕಟುಟೀಕೆ ಮಾಡಿದ್ದು, ಅವಕಾಶಗಳನ್ನು ರದ್ದು ಮಾಡಿದೆ. ಇದು, ಕೇಂದ್ರ ಸರ್ಕಾರಕ್ಕಾದ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಲಾಗುತ್ತಿದೆ.

ADVERTISEMENT

ಮುಖ್ಯನ್ಯಾಯಮೂರ್ತಿ ಬಿ.ಆರ್‌.ಗವಾಯಿ ಹಾಗೂ ಕೆ.ವಿನೋದ ಚಂದ್ರನ್‌ ಅವರು ಇದ್ದ ನ್ಯಾಯಪೀಠವು ಈ ಕುರಿತು 137 ಪುಟಗಳ ತೀರ್ಪು ನೀಡಿದೆ.

‘ನ್ಯಾಯಮಂಡಳಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಗೆ ಸಂಬಂಧಿಸಿ ಸರಣಿ ತೀರ್ಪುಗಳನ್ನು ನೀಡಿ, ಅರ್ಜಿಗಳನ್ನು ಇತ್ಯರ್ಥಪಡಿಸಿ ನಿರ್ದೇಶನಗಳನ್ನು ನೀಡಲಾಗಿದೆ. ಆದರೆ, ನ್ಯಾಯಾಲಯದ ನಿರ್ದೇಶನಗಳನ್ನು ಕೇಂದ್ರ ಸರ್ಕಾರ ಪದೇಪದೇ ತಿರಸ್ಕರಿಸುತ್ತಿದೆ. ಇಂಥ ನಡೆಯನ್ನು ಒಪ್ಪಲು ಸಾಧ್ಯ ಇಲ್ಲ’ ಎಂದು ಪೀಠ ಹೇಳಿದೆ.

‘ನ್ಯಾಯಮಂಡಳಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಈ ಸಂಬಂಧ ನ್ಯಾಯಾಲಯ ನೀಡಿರುವ ಸೂಚನೆಗಳನ್ನು ಅನುಷ್ಠಾನಗೊಳಿಸುವ ಬದಲು ಕೇಂದ್ರ ಸರ್ಕಾರವು ಹೊಸ ಕಾಯ್ದೆ ರೂಪಿಸಲು ಅಥವಾ ರದ್ದು ಮಾಡಲಾದ ಅವಕಾಶಗಳನ್ನೇ ಪುನಃ ಕಾಯ್ದೆಯಲ್ಲಿ ಸೇರಿಸುವ ಮೂಲಕ ಪುನಃ ಸಾಂವಿಧಾನಿಕ ಚರ್ಚೆಗಳಿಗೆ ದಾರಿ ಮಾಡಿಕೊಡುತ್ತಿರುವುದು ದುರದೃಷ್ಟಕರ’ ಎಂದೂ ಹೇಳಿದೆ.

ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆ ಪ್ರಶ್ನಿಸಿ ಮದ್ರಾಸ್‌ ವಕೀಲರ ಸಂಘ ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ಪುರಸ್ಕರಿಸಿದೆ. ನ್ಯಾಯಮಂಡಳಿಗಳಿಗೆ ನೇಮಕವಾಗುವವರಿಗೆ ಕನಿಷ್ಠ 50 ವರ್ಷ ಆಗಿರಬೇಕು ಎಂಬುದು ಸೇರಿ ಕಾಯ್ದೆಯಲ್ಲಿನ ಹಲವಾರು ವಿವಾದಾತ್ಮಕ ಅವಕಾಶಗಳನ್ನು ಪೀಠವು ರದ್ದು ಮಾಡಿದೆ.

ಸಿಜೆಐ ಬಿ.ಆರ್‌.ಗವಾಯಿ
ಕಾಯ್ದೆಯೊಂದರಲ್ಲಿನ ದೋಷವನ್ನು ನ್ಯಾಯಾಲಯ ಗುರುತಿಸಿದಾಗ ಅದನ್ನು ಸರಿಪಡಿಸುವ ಕೆಲಸವನ್ನು ಸಂಸತ್‌ ಮಾಡಬೇಕು. ಈ ಪ್ರಕ್ರಿಯೆ ನ್ಯಾಯಾಲಯದ ತರ್ಕಕ್ಕೆ ಅನುಗುಣವಾಗಿರಬೇಕು
ಬಿ.ಆರ್‌.ಗವಾಯಿ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ

‘ಸುಪ್ರೀಂ’ ಸೂಚನೆಗಳು

* ಈ ತೀರ್ಪು ಪ್ರಕಟವಾದ ದಿನದಿಂದ ನಾಲ್ಕು ತಿಂಗಳ ಒಳಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ನ್ಯಾಯಮಂಡಳಿಗಳ ಆಯೋಗ ರಚಿಸಬೇಕು

* ಈ ಆಯೋಗವು ಸುಪ್ರೀಂ ಕೋರ್ಟ್‌ ನೀಡಿದ ನಿರ್ದೇಶನಗಳಂತೆ ಕಾರ್ಯ ನಿರ್ವಹಿಸಬೇಕು. ಮುಖ್ಯವಾಗಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು

* ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆ–2021 ಜಾರಿಗೆ ಬರುವುದಕ್ಕೂ ಮುನ್ನ ನೇಮಕಗೊಂಡಿದ್ದರೆ ಹಾಗೂ ಕಾಯ್ದೆ ಅನುಷ್ಠಾನಗೊಂಡ ನಂತರ ನೇಮಕಾತಿ ಕುರಿತು ಅಧಿಸೂಚನೆ ಪ್ರಕಟಿಸಿದ್ದಲ್ಲಿ ಅಂತಹ ನೇಮಕಾತಿಗಳನ್ನು ಮುಂದುವರಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.