ADVERTISEMENT

ಮಸೂದೆಗೆ ಸಹಿ ಹಾಕಲು ರಾಜ್ಯಪಾಲ, ರಾಷ್ಟ್ರಪತಿಗೆ ಸಮಯ ಮಿತಿ ಇಲ್ಲ: ಸುಪ್ರೀಂ ಕೋರ್ಟ್

ಪಿಟಿಐ
Published 20 ನವೆಂಬರ್ 2025, 10:31 IST
Last Updated 20 ನವೆಂಬರ್ 2025, 10:31 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ರಾಜ್ಯಗಳ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಅವರಿಗೆ ಕಾಲಮಿತಿ ನಿಗದಿ ಮಾಡುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಮಹತ್ವದ ತೀರ್ಪು ನೀಡಿದೆ.

ಮಸೂದೆಗಳಿಗೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಅವರಿಂದ ಅಂಕಿತ ಲಭಿಸಿದೆ ಎಂಬುದಾಗಿ ಪರಿಭಾವಿಸುವುದನ್ನು (ಡೀಮ್ಡ್‌) ಕೂಡ ಸುಪ್ರೀಂ ಕೋರ್ಟ್‌ ನಿರ್ಬಂಧಿಸಿದೆ.

ಅದೇ ರೀತಿ, ಮಸೂದೆಗಳಿಗೆ ಸಂಬಂಧಿಸಿದಂತೆ ಸಂವಿಧಾನದ 200ನೇ ವಿಧಿಯಡಿ ನೀಡಲಾಗಿರುವ ‘ಮೂರು ಆಯ್ಕೆ’ಗಳ ಅಧಿಕಾರ ಮೀರಿ, ರಾಜ್ಯಪಾಲರು ಯಾವುದೇ ತೀರ್ಮಾನವನ್ನೂ ತೆಗೆದುಕೊಳ್ಳದೆ ಸುಮ್ಮನೆ ಕೂರುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಐವರು ಸದಸ್ಯರಿದ್ದ ಸಂವಿಧಾನ ಪೀಠವು ತಾನು ಪ್ರಕಟಿಸಿರುವ ಸರ್ವಾನುಮತದ ತೀರ್ಪಿನಲ್ಲಿ ಹೇಳಿದೆ.

ADVERTISEMENT

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ವಿಕ್ರಮನಾಥ್‌, ಪಿ.ಎಸ್‌.ನರಸಿಂಹ ಹಾಗೂ ಎ.ಎಸ್‌.ಚಂದೂರ್ಕರ್ ಈ ಪೀಠದಲ್ಲಿ ಇದ್ದರು.

‘ಮಸೂದೆಗಳಿಗೆ ಸಂಬಂಧಿಸಿದಂತೆ ತೀರ್ಮಾನ ಮಾಡದೆ ಸುಮ್ಮನೆ ಕೂರಲು ರಾಜ್ಯಪಾಲರಿಗೆ ಅನಿಯಂತ್ರಿತ ಅಧಿಕಾರ ಇದೆ ಎಂದು ನಾವು ಭಾವಿಸುವುದಿಲ್ಲ. ಹೊಂದಾಣಿಕೆಗೆ ಅವಕಾಶ ಕಲ್ಪಿಸಿರುವ ಉದಾತ್ತ ಸಂವಿಧಾನ ನಮ್ಮದು. ಭಾರತದಂತಹ ಪ್ರಜಾಸತ್ತಾತ್ಮಕ ದೇಶದಲ್ಲಿ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಮಾಡುವುದು ಕೂಡ ಸಂವಿಧಾನದ ಈ ಮೌಲ್ಯಕ್ಕೆ ವಿರುದ್ಧವಾದುದು’ ಎಂದು ತೀರ್ಪನ್ನು ಓದಿದ ಮುಖ್ಯ ನ್ಯಾಯಮೂರ್ತಿ ಗವಾಯಿ ಹೇಳಿದರು.

ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಅವರು 10 ಮಸೂದೆಗಳನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿದಿರುವುದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ರಾಜ್ಯಗಳ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ವಿಚಾರವಾಗಿ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಮಾಡಿ, ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ನೇತೃತ್ವದ ಪೀಠವು ಏಪ್ರಿಲ್‌ 8ರಂದು ತೀರ್ಪು ನೀಡಿತ್ತು.

ಈ ತೀರ್ಪಿನ ಕಾರಣದಿಂದ, ‘ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ನ್ಯಾಯಾಲಯ ಗಡುವು ನಿಗದಿ ಮಾಡಬಹುದೇ’ ಎಂದು ಪ್ರಶ್ನಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟನೆ ಕೇಳಿದ್ದರು.

ಸಂವಿಧಾನದ 143(1)ನೇ ವಿಧಿಯು, ಸುಪ್ರೀಂ ಕೋರ್ಟ್‌ನೊಂದಿಗೆ ಸಮಾಲೋಚನೆ ನಡೆಸುವುದಕ್ಕೆ ರಾಷ್ಟ್ರಪತಿ ಹೊಂದಿರುವ ಅಧಿಕಾರಕ್ಕೆ ಸಂಬಂಧಿಸಿದ್ದಾಗಿದೆ. ಈ ವಿಧಿಯಡಿ ದತ್ತವಾದ ಅಧಿಕಾರವನ್ನು ಅಪರೂಪವೆಂಬಂತೆ ಬಳಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 14 ಮಹತ್ವದ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್‌ ಮುಂದಿಟ್ಟಿದ್ದರು

ರಾಷ್ಟ್ರಪತಿಯವರು ಕೇಳಿರುವ ಪ್ರಶ್ನೆಗಳ ಕುರಿತು ವಿಚಾರಣೆ ನಡೆಸಿದ್ದ ಐವರು ಸದಸ್ಯರ ಸಂವಿಧಾನ ಪೀಠವು, ಸೆಪ್ಟೆಂಬರ್‌ 11ರಂದು ತೀರ್ಪನ್ನು ಕಾಯ್ದಿರಿಸಿತ್ತು. ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ತೀರ್ಪನ್ನು ಪೀಠವು ಈಗ ಪ್ರಕಟಿಸಿದೆ.

ಪೀಠ ಹೇಳಿದ್ದು

  • ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರು ಮೂರು ಆಯ್ಕೆಗಳನ್ನು ಹೊಂದಿದ್ದಾರೆ. ಮೊದಲನೆಯದು ಮಸೂದೆಗಳಿಗೆ ಅಂಕಿತ ಹಾಕುವುದು. ಎರಡನೆಯದು ಮಸೂದೆಗಳನ್ನು ರಾಷ್ಟ್ರಪತಿಗೆ ಶಿಫಾರಸು ಮಾಡುವುದು. ಮಸೂದೆಗಳಿಗೆ ಅಂಕಿತ ಹಾಕುವುದನ್ನು ತಡೆದು ತಮ್ಮ ಟಿಪ್ಪಣಿಯೊಂದಿಗೆ ಅವುಗಳನ್ನು ಪುನಃ ವಿಧಾನಸಭೆಗೆ ಮರಳಿಸುವುದು ಮೂರನೇ ಆಯ್ಕೆ

  • ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ಸಂಬಂಧಿಸಿ ಈ ಮೂರು ಸಾಂವಿಧಾನಿಕ ಆಯ್ಕೆಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ವಿವೇಚನಾಧಿಕಾರವನ್ನು ರಾಜ್ಯಪಾಲರು ಹೊಂದಿದ್ದಾರೆ

  • ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ಸಂಬಂಧಿಸಿ ರಾಜ್ಯಪಾಲರಿಗೆ ಸಾಂವಿಧಾನಿಕವಾಗಿ ಕಾಲಮಿತಿ ನಿಗದಿ ಮಾಡಲಾಗಿಲ್ಲ. ಸಂವಿಧಾನದತ್ತವಾಗಿ ತಮಗಿರುವ ಅಧಿಕಾರವನ್ನು ಅವರು ಚಲಾಯಿಸಬಹುದು. ಇಂತಹ ಸಂದರ್ಭದಲ್ಲಿ ಸಂವಿಧಾನದ 200ನೇ ವಿಧಿಯಡಿ ತಮಗಿರುವ ಅಧಿಕಾರವನ್ನು ಚಲಾಯಿಸುವಂತೆ ನ್ಯಾಯಾಂಗವು ಅವರಿಗೆ ಕಾಲಮಿತಿ ನಿಗದಿ ಮಾಡುವುದು ಸಮಂಜಸವಾಗದು

  • ಸಂವಿಧಾನದ 142ನೇ ವಿಧಿಯಡಿ ರಾಷ್ಟ್ರಪತಿ/ರಾಜ್ಯಪಾಲರಿಗೆ ನೀಡಲಾಗಿರುವ ಸಾಂವಿಧಾನಿಕ ಅಧಿಕಾರಗಳು ಹಾಗೂ ಅವರು ಹೊರಡಿಸಬಹುದಾದ ಆದೇಶಗಳಿಗೆ ಯಾವುದೇ ರೀತಿಯ ಪರ್ಯಾಯ ಇಲ್ಲ. ಹೀಗಾಗಿ ‘ಮಸೂದೆಗಳಿಗೆ ಅಂಕಿತ ದೊರೆತಿದೆ ಎಂದು ಭಾವಿಸಬೇಕು’ ಎಂಬ ಪರಿಕಲ್ಪನೆಗೆ ಈ ವಿಧಿಯು ಅವಕಾಶ ನೀಡುವುದಿಲ್ಲ

  • 200ನೇ ವಿಧಿಯಡಿ ರಾಜ್ಯಪಾಲರು ನಿರ್ವಹಿಸುವ ಕಾರ್ಯ ಕುರಿತು ನ್ಯಾಯಾಲಯ ವಿಚಾರಣೆ ನಡೆಸುವುದು ಸಮಂಜಸವಲ್ಲ. ಆದರೆ ಅಧಿಕಾರ ಬಳಸುವ ವಿಚಾರದಲ್ಲಿ ವಿಳಂಬ ವಿವರಿಸಲಾಗದ ಮತ್ತು ಅನಿರ್ದಿಷ್ಟವಾದ ನಿಷ್ಕ್ರಿಯತೆ ಕಂಡುಬಂದ ಸಂದರ್ಭಗಳಲ್ಲಿ ಸೂಕ್ತ ಕಾಲಮಿತಿಯೊಳಗೆ ಸಂವಿಧಾನದಡಿ ಕ್ರಮ ಕೈಗೊಳ್ಳುವಂತೆ ಅವರಿಗೆ ನ್ಯಾಯಾಲಯವು ಸೀಮಿತ ಆದೇಶ ನೀಡಬಹುದು. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಕೈಗೊಂಡ ನಿರ್ಣಯ ಕುರಿತು ನ್ಯಾಯಾಲಯ ಯಾವುದೇ ಅಭಿಪ್ರಾಯ ಹೇಳುವಂತಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.