ನವದೆಹಲಿ: ರಾಜ್ಯ ವಿಧಾನಸಭೆಗಳಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ಕಾಲಮಿತಿ ವಿಧಿಸುವುದಕ್ಕೆ ಸಂಬಂಧಿಸಿದಂತೆ 14 ಅಂಶಗಳ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೋರಿರುವ ಸ್ಪಷ್ಟನೆ ಕುರಿತು ಅಭಿಪ್ರಾಯ ತಿಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
‘ರಾಷ್ಟ್ರಪತಿಗಳು ಉಲ್ಲೇಖಿಸಿರುವ ವಿಚಾರಗಳು ಇಡೀ ದೇಶಕ್ಕೆ ಸಂಬಂಧಿಸಿದ್ದಾಗಿವೆ’ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರನ್ನು ಒಳಗೊಂಡ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ನ್ಯಾಯಪೀಠವು ತಿಳಿಸಿದೆ. ಈ ಕುರಿತ ಉತ್ತರವನ್ನು ವಾರದ ಒಳಗಾಗಿ ಸಲ್ಲಿಸುವಂತೆ ತಿಳಿಸಿದ್ದು, ಜುಲೈ 29ರ ಒಳಗಾಗಿ ಕಾಲಾನುಕ್ರಮಣಿಕೆ ಹಾಗೂ ಕಾರ್ಯವಿಧಾನದ ವಿವರಗಳನ್ನು ಸಲ್ಲಿಸುವಂತೆಯೂ ನಿರ್ದೇಶನ ನೀಡಿದೆ.
‘ಸಂವಿಧಾನದ ವ್ಯಾಖ್ಯಾನದ ಕುರಿತು ಸಮಸ್ಯೆಗಳಿವೆ. ಈ ಕುರಿತು ನಮಗೆ ನೆರವಾಗುವಂತೆ ಅಟಾರ್ನಿ ಜನರಲ್ ಅವರಿಗೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಹಾಗೂ ಎಲ್ಲ ರಾಜ್ಯ ಸರ್ಕಾರಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ಅವರು ಹಾಜರಾಗಲಿದ್ದಾರೆ. ಎಲ್ಲ ರಾಜ್ಯ ಸರ್ಕಾರಗಳಿಗೂ ಇ–ಮೇಲ್ ಮೂಲಕ ನೋಟಿಸ್ ಕಳುಹಿಸಿದ್ದು, ಮುಂದಿನ ಮಂಗಳವಾರ ಈ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ವಕೀಲರಿಗೂ ನೋಟಿಸ್ ಕಳುಹಿಸಲಾಗಿದೆ’ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಪಿ.ಎಸ್.ನರಸಿಂಹ ಹಾಗೂ ಎ.ಎಸ್. ಚಂದೂರ್‌ಕರ್ ಅವರನ್ನು ಒಳಗೊಂಡ ನ್ಯಾಯಪೀಠವು ಆದೇಶ ನೀಡಿದೆ.
ಸಂಕ್ಷಿಪ್ತ ವಿಚಾರಣೆಯ ಸಂದರ್ಭದಲ್ಲಿ ಕೇರಳ ಹಾಗೂ ತಮಿಳುನಾಡು ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ಕೆ.ಕೆ.ವೇಣುಗೋಪಾಲ್, ಪಿ. ವಿಲ್ಸನ್ ಅವರು, ರಾಷ್ಟ್ರಪತಿಯವರು ಸ್ಪಷ್ಟನೆ ಕೋರಿರುವುದನ್ನು ವಿರೋಧಿಸಿದರು ಮತ್ತು ಅದು ವಿಚಾರಣೆಗೆ ಯೋಗ್ಯವೇ ಎಂದು ಪ್ರಶ್ನಿಸಿದರು.
‘ಈ ಆಕ್ಷೇಪಣೆಗಳನ್ನು ನಂತರ ಎತ್ತಬಹುದು’ ಎಂದು ತಿಳಿಸಿದ ಸಿಜೆಐ, ‘ಈ ವಿಚಾರವನ್ನು ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಪರಿಗಣಿಸಲಾಗುವುದು’ ಎಂದರು.
ನ್ಯಾಯಾಲಯದ ತೀರ್ಪು: ರಾಜ್ಯಪಾಲರು ಅಂಕಿತಕ್ಕಾಗಿ ಕಳುಹಿಸುವ ಮಸೂದೆಗಳನ್ನು ರಾಷ್ಟ್ರಪತಿ ತಡೆಹಿಡಿದಿದ್ದರೆ, ರಾಜ್ಯ ಸರ್ಕಾರಗಳು ನೇರವಾಗಿ ಸುಪ್ರೀಂ ಕೋರ್ಟ್ ಕದ ತಟ್ಟಬಹುದು ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಆರ್.ಮಹಾದೇವನ್ ಅವರು ಇದ್ದ ನ್ಯಾಯಪೀಠವು, ಏಪ್ರಿಲ್ 8ರಂದು ತೀರ್ಪು ನೀಡಿತ್ತು.
ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳ ಕುರಿತು ನಿರ್ಧಾರ ಕೈಗೊಳ್ಳಲು ಎಲ್ಲ ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಮಾಡಿತ್ತು. ಮಂತ್ರಿ ಪರಿಷತ್ತಿನ ಸಲಹೆಯಂತೆ ರಾಜ್ಯಪಾಲರು ಕ್ರಮ ಕೈಗೊಳ್ಳುವುದು ಕಡ್ಡಾಯ ಎಂದೂ ಪೀಠವು ಹೇಳಿತ್ತು.
14 ಪ್ರಶ್ನೆ ಕೇಳಿದ್ದ ರಾಷ್ಟ್ರಪತಿ
ರಾಜ್ಯ ವಿಧಾನಸಭೆಗಳಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ರಾಷ್ಟ್ರಪತಿಯವರು ಕಾಲಮಿತಿಯೊಳಗೆ ಅಂಕಿತ ಹಾಕಬೇಕು ಎಂದು ಏಪ್ರಿಲ್ 8ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 14 ಮಹತ್ವದ ಪ್ರಶ್ನೆಗಳನ್ನು ಕೇಳಿದ್ದರು. ಸಂವಿಧಾನದ 143(1)ನೇ ವಿಧಿಯಡಿ ದತ್ತವಾದ ಅಧಿಕಾರವನ್ನು ಅಪರೂಪವೆಂಬಂತೆ ಬಳಸಿ ಅವರು ಈ ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ‘ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಕಾನೂನಿಗೆ ಸಂಬಂಧಿಸಿ ಈ ಪ್ರಶ್ನೆಗಳು ಉದ್ಭವಿಸಿವೆ. ಸಾರ್ವಜನಿಕ ಮಹತ್ವದ ಈ ಪ್ರಶ್ನೆಗಳಿಗೆ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಭಾವಿಸಿದ್ದೇನೆ’ ಎಂದು ರಾಷ್ಟ್ರಪತಿ ಹೇಳಿದ್ದರು. ಸಂವಿಧಾನದ 143(1) ವಿಧಿಯು ಸುಪ್ರೀಂ ಕೋರ್ಟ್‌ನೊಂದಿಗೆ ಸಮಾಲೋಚನೆ ನಡೆಸುವುದಕ್ಕೆ ರಾಷ್ಟ್ರಪತಿ ಹೊಂದಿರುವ ಅಧಿಕಾರಕ್ಕೆ ಸಂಬಂಧಿಸಿದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.