ನವದೆಹಲಿ: ₹1.9 ಕೋಟಿ ವಂಚನೆ ಪ್ರಕರಣದ ಜಾಮೀನು ಆದೇಶಗಳಲ್ಲಿ ‘ಗಂಭೀರ ಲೋಪ’ ಎಸಗಿದ್ದಕ್ಕಾಗಿ ಇಬ್ಬರು ನ್ಯಾಯಾಧೀಶರಿಗೆ ಏಳು ದಿನಗಳ ಕಡ್ಡಾಯ ತರಬೇತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿರುವ ಅಪರೂಪದ ಘಟನೆ ನಡೆದಿದೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಮತ್ತು ಸೆಷನ್ಸ್ ನ್ಯಾಯಾಧೀಶರು ದೆಹಲಿ ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಆರೋಪಿ ದಂಪತಿಯಾದ ಶಿಕ್ಷಾ ರಾಥೋಡ್ ಮತ್ತು ಅವರ ಪತಿ ಪರವಾಗಿ ಬಂದಿರುವ ಸರಣಿ ಜಾಮೀನು ಆದೇಶಗಳ ವಿರುದ್ಧ ಮೆರ್ಸಸ್ ನೆಟ್‌ಸಿಟಿ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್‌ನ ಮೇಲ್ಮನವಿಯನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
‘2023ರ ನವೆಂಬರ್ 10 ಮತ್ತು 2024ರ ಆಗಸ್ಟ್ 16ರಂದು ಈ ಆದೇಶಗಳನ್ನು ಹೊರಡಿಸಿದ್ದ ನ್ಯಾಯಾಧೀಶರು ಕನಿಷ್ಠ 7 ದಿನಗಳ ಅವಧಿಗೆ ವಿಶೇಷ ನ್ಯಾಯಾಂಗ ತರಬೇತಿಗೆ ಒಳಗಾಗಬೇಕು’ ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಅವರಿಗೆ ನ್ಯಾಯಾಂಗ ಪ್ರಕ್ರಿಯೆಗಳನ್ನು ಹೇಗೆ ನಡೆಸುವುದು ಎಂಬುದರ ಕುರಿತು ತರಬೇತಿ ನೀಡಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರನ್ನು ‘ಸುಪ್ರೀಂ’ ಕೇಳಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.