ADVERTISEMENT

ನಷ್ಟ ಪರಿಹಾರ: ದೆಹಲಿ ಹೈಕೋರ್ಟ್‌ ಅದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ಸ್ಪೈಸ್‌ಜೆಟ್‌ ವಿರುದ್ಧ ಕಲಾನಿಧಿ ಮಾರನ್ ಅರ್ಜಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 15:42 IST
Last Updated 23 ಜುಲೈ 2025, 15:42 IST
–
   

ನವದೆಹಲಿ: ಸ್ಪೈಸ್‌ಜೆಟ್‌ ಕಂಪನಿ ನಷ್ಟ ಪರಿಹಾರವಾಗಿ ₹1,323 ಕೋಟಿ ನೀಡಬೇಕು ಎಂದು ಕೋರಿ ಕೆಎಎಲ್‌ ಏರ್‌ವೇಸ್‌ ಹಾಗೂ ಅದರ ಮಾಲೀಕ ಕಲಾನಿಧಿ ಮಾರನ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ದೆಹಲಿ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಬುಧವಾರ ಎತ್ತಿ ಹಿಡಿದಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಹಾಗೂ ಎ.ಎಸ್‌.ಚಂದೂರ್ಕರ್ ಅವರು ಇದ್ದ ಪೀಠವು, ಈ ಕುರಿತು ಕೆಎಎಲ್‌ ಏರ್‌ವೇಸ್‌ ಹಾಗೂ ಕಲಾನಿಧಿ ಮಾರನ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿತು.

‘ಸಂವಿಧಾನದ 136ನೇ ವಿಧಿ ಅನ್ವಯ, ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ತಾನು ಒಲವು ಹೊಂದಿಲ್ಲ’ ಎಂದು ‍ಪೀಠ ಸ್ಪಷ್ಟಪಡಿಸಿತು.

ADVERTISEMENT

ಮೇ 26ರಂದು ಕೆಎಎಲ್‌ ಏರ್‌ವೇಸ್‌ ಹಾಗೂ ಮಾರನ್ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ, ‘ಪ್ರಕರಣಕ್ಕೆ ಸಂಬಂಧಿಸಿ ಮೇಲ್ಮನವಿ ಸಲ್ಲಿಸುವಲ್ಲಿ ತೀರಾ ವಿಳಂಬ ಮಾಡುವ ಜೊತೆಗೆ, ನ್ಯಾಯಾಲಯದ ಸಮಯ ಹಾಳು ಮಾಡಲಾಗಿದೆ’ ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತ್ತು. 

ಪ್ರಕರಣವೇನು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸ್ಪೈಸ್‌ಜೆಟ್‌ ಕಂಪನಿಯ ಷೇರುಗಳನ್ನು ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ, ಸ್ಪೈಸ್‌ಜೆಟ್‌ ಮುಖ್ಯಸ್ಥ ಅಜಯ್ ಸಿಂಗ್‌ ಹಾಗೂ ಕೆಎಎಲ್‌ ಏರ್‌ವೇಸ್‌ ಮತ್ತು ಇದರ ಮಾಲೀಕ ಕಲಾನಿಧಿ ಮಾರನ್‌ ನಡುವಿನ ವ್ಯಾಜ್ಯ ಇದಾಗಿದೆ.

ನಷ್ಟ ಪರಿಹಾರವಾಗಿ ಸ್ಪೈಸ್‌ಜೆಟ್‌ ಕಂಪನಿಯು ತಮಗೆ ₹1,323 ಕೋಟಿ ನೀಡಬೇಕು ಎಂದು ಕೋರಿ ಮಾರನ್‌ ಅವರು ಮಧ್ಯಸ್ಥಿಕೆ ನ್ಯಾಯಮಂಡಳಿ ಮೊರೆ ಹೋಗಿದ್ದರು.

ಈ ಅರ್ಜಿ ತಿರಸ್ಕರಿಸಿದ್ದ ನ್ಯಾಯಮಂಡಳಿ, ಮಾರನ್ ಅವರಿಗೆ ₹579 ಕೋಟಿಯನ್ನು ಬಡ್ಡಿಯೊಂದಿಗೆ ಮರುಪಾವತಿಸುವಂತೆ ಆದೇಶಿಸಿತ್ತು. ಸ್ಪೈಸ್‌ಜೆಟ್‌ ಹಾಗೂ ಮಾರನ್‌ ಒಡೆತನದ ಕಂಪನಿಗಳೆರಡೂ ನ್ಯಾಯಮಂಡಳಿ ಆದೇಶ ಪ್ರಶ್ನಿಸಿ, ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದವು.

ಮಾರನ್‌ ಹಾಗೂ ಅಜಯ್‌ ಸಿಂಗ್‌ ಅವರ ಅರ್ಜಿಗಳನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ತಿರಸ್ಕರಿಸಿ 2023ರ ಜುಲೈನಲ್ಲಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅಜಯ್‌ ಸಿಂಗ್‌ ಅವರು ನಿಗದಿತ 60 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಿದ್ದನ್ನು ಪುರಸ್ಕರಿಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ, ಸ್ಪೈಸ್‌ಜೆಟ್‌ ವಾದ ನ್ಯಾಯಸಮ್ಮತ ಎಂದು ಹೇಳಿ, ಹೊಸದಾಗಿ ವಿಚಾರಣೆ ನಡೆಸುವಂತೆ ಏಕ ಸದಸ್ಯ ಪೀಠಕ್ಕೆ ಅರ್ಜಿಯನ್ನು ವರ್ಗಾವಣೆ ಮಾಡಿತ್ತು.

ನಂತರ, ನಷ್ಟ ಪರಿಹಾರ ಕೋರಿ ಮಾರನ್ ಹಾಗೂ ಕೆಎಎಲ್‌ ಏರ್‌ವೇಸ್ ಪ್ರತಿನಿಧಿಗಳು ಪುನಃ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ನಿಗದಿತ ಅವಧಿ ಮುಗಿದ ನಂತರ 55 ದಿನ ವಿಳಂಬವಾಗಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದ ಪೀಠ ಅರ್ಜಿಯನ್ನು ವಜಾಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.