ನವದೆಹಲಿ: ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಶಾಲಾ ಮೈದಾನದಲ್ಲಿ ರಾಮಲೀಲಾ ಉತ್ಸವ ನಡೆಸುವುದನ್ನು ನಿಷೇಧಿಸಿದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.
ವಿದ್ಯಾರ್ಥಿಗಳಿಗೆ ಯಾವುದೇ ಅನಾನುಕೂಲತೆ ಉಂಟಾಗಬಾರದು ಎಂಬ ಷರತ್ತಿನೊಂದಿಗೆ ಉತ್ಸವಗಳನ್ನು ಮುಂದುವರಿಸಲು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಉಜ್ಜಲ್ ಭೂಯಾನ್ ಹಾಗೂ ಎನ್.ಕೋಟೀಶ್ವರ ಸಿಂಗ್ ಅವರು ಇದ್ದ ನ್ಯಾಯಪೀಠವು ಅನುಮತಿ ನೀಡಿದೆ.
‘ಶಾಲಾ ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದನ್ನು ನಾವು ಅನುಮೋದಿಸದಿದ್ದರೂ, ರಾಮಲೀಲಾ ಉತ್ಸವ ಕಳೆದ 100 ವರ್ಷಗಳಿಂದ ನಡೆಯುತ್ತಿದೆ. ಸೆಪ್ಟೆಂಬರ್ 14ರಿಂದಲೇ ಈ ವರ್ಷದ ಆಚರಣೆಗಳು ಆರಂಭಗೊಂಡಿವೆ’ ಎಂದು ಹೇಳಿರುವ ನ್ಯಾಯಪೀಠವು, ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.
ಶಾಲೆಗಳ ಆಟದ ಮೈದಾನಗಳನ್ನು ವಿದ್ಯಾರ್ಥಿಗಾಗಿಯೇ ಮೀಸಲಿಡಬೇಕು. ಧಾರ್ಮಿಕ ಉತ್ಸವಗಳಿಗೆ ಪ್ರತ್ಯೇಕ ಸ್ಥಳವನ್ನು ಗುರುತಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುವಂತೆ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ರಾಮಲೀಲಾ ಉತ್ಸವ ಆರಂಭವಾದ ಬಳಿಕ ಪ್ರಕರಣ ದಾಖಲಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್, ಅರ್ಜಿದಾರ ಪ್ರದೀಪ್ ಸಿಂಗ್ ರಾಣಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.