
ವಿದ್ಯಾರ್ಥಿಗಳ ಪ್ರತಿಭಟನೆ
ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ ತಡೆಗೆ ‘ಸಮಾನತಾ ಸಮಿತಿ’ಗಳನ್ನು ರಚಿಸಲು ನಿರ್ದೇಶಿಸಿ, ರೂಪಿಸಿದ್ದ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.
ಈ ನಿಯಮಗಳು ಮೇಲ್ನೋಟಕ್ಕೆ ಅಸ್ಪಷ್ಟವಾಗಿದ್ದು, ದುರುಪಯೋಗಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅದು ತಿಳಿಸಿದೆ.
‘ಸಮಾಜದ ಮೇಲೆ ಅಪಾಯಕಾರಿ ಪರಿಣಾಮ ಬೀರುವ ಮತ್ತು ಸಮಾಜದಲ್ಲಿ ವಿಭಜನೆಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕಾದ ಅಗತ್ಯವಿದೆ’ ಎಂದು ಸುಪ್ರೀಂ ಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
ಯುಜಿಸಿಯ ನೂತನ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ನಡೆಸಿತು.
ಯುಜಿಸಿ ನಿಯಮ– 2026ಕ್ಕೆ ತಡೆ ನೀಡಿದ ಪೀಠವು, ‘2012ರ ನಿಯಮಗಳು ಮುಂದುವರಿಯಲಿ’ ಎಂದು ಹೇಳಿತು. ತಜ್ಞರನ್ನು ಒಳಗೊಂಡ ಸಮಿತಿಯು ಈ ನಿಯಮಗಳನ್ನು ಪುನರ್ ಪರಿಶೀಲಿಸಬೇಕು ಎಂದೂ ಸೂಚಿಸಿತು. ಹೊಸ ನಿಯಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಯುಜಿಸಿಗೆ ನೋಟಿಸ್ ಜಾರಿಗೊಳಿಸಿದ ಪೀಠವು, ಮಾರ್ಚ್ 19ರೊಳಗೆ ಉತ್ತರಿಸುವಂತೆ ನಿರ್ದೇಶಿಸಿತು.
ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಜಾತಿ ತಾರತಮ್ಯದ ದೂರುಗಳನ್ನು ಪರಿಶೀಲಿಸಲು ಮತ್ತು ಸಮಾನತೆಯನ್ನು ಉತ್ತೇಜಿಸಲು ‘ಸಮಾನತೆ ಸಮಿತಿ’ಗಳನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಯುಜಿಸಿ ಜನವರಿ 13ರಂದು ಹೊರಡಿಸಿದ್ದ ಹೊಸ ನಿಯಮಗಳಲ್ಲಿ ತಿಳಿಸಿತ್ತು.
ಈ ಸಮಿತಿಗಳು ಇತರ ಹಿಂದುಳಿದ ವರ್ಗ (ಒಬಿಸಿ), ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಅಂಗವಿಕಲ ಮತ್ತು ಮಹಿಳಾ ಸದಸ್ಯರನ್ನು ಒಳಗೊಂಡಿರಬೇಕು ಎಂದು ಹೇಳಲಾಗಿತ್ತು.
ಈ ನಿಯಮಗಳಲ್ಲಿನ ‘ಜಾತಿ ತಾರತಮ್ಯದ ವ್ಯಾಖ್ಯಾನ’ ಮತ್ತು ಅದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಮೃತ್ಯುಂಜಯ ತಿವಾರಿ, ವಿನೀತ್ ಜಿಂದಾಲ್, ರಾಹುಲ್ ದಿವಾನ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಜಾತಿ ತಾರತಮ್ಯವನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಸೇರಿದವರ ವಿರುದ್ಧದ ತಾರತಮ್ಯ ಎಂದು ವ್ಯಾಖ್ಯಾನಿಸಲಾಗಿದೆ. ಉಳಿದಂತೆ ಮೀಸಲು ರಹಿತ ಅಥವಾ ಸಾಮಾನ್ಯ ವರ್ಗದವರಿಗೆ ಸಾಂಸ್ಥಿಕ ರಕ್ಷಣೆಯನ್ನು ಮತ್ತು ಅವರ ಕುಂದುಕೊರತೆಗಳಿಗೆ ಪರಿಹಾರವನ್ನು ನಿರಾಕರಿಸಿರುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
ಈ ನಿಯಮಗಳನ್ನು ವಿರೋಧಿಸಿ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು. ಅಲ್ಲದೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಈ ನಿಯಮಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.