ADVERTISEMENT

ಮರಾಠಿಗರಿಗೆ ಸಿಗಲ್ಲ ಮೀಸಲಾತಿ: ಮಹಾರಾಷ್ಟ್ರದ ಕಾನೂನು ಅಸಿಂಧು ಎಂದ ಸುಪ್ರೀಂ

ಪಿಟಿಐ
Published 5 ಮೇ 2021, 6:27 IST
Last Updated 5 ಮೇ 2021, 6:27 IST
ಸುಪ್ರೀಂ ಕೋರ್ಟ್ – ಪಿಟಿಐ ಸಂಗ್ರಹ ಚಿತ್ರ
ಸುಪ್ರೀಂ ಕೋರ್ಟ್ – ಪಿಟಿಐ ಸಂಗ್ರಹ ಚಿತ್ರ   

ನವದೆಹಲಿ: ಮರಾಠ ಸಮುದಾಯದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ದಾಖಲಾತಿಯಲ್ಲಿ ಮೀಸಲಾತಿ ನೀಡುವ ಮಹಾರಾಷ್ಟ್ರ ಸರ್ಕಾರದ ಕಾನೂನನ್ನು ಸುಪ್ರೀಂ ಕೋರ್ಟ್ ಬುಧವಾರ ಅಸಿಂಧುಗೊಳಿಸಿದೆ.

ಮೀಸಲಾತಿಯ ಶೇ 50ರ ಮಿತಿಯನ್ನು ಮೀರಲು ಮಹಾರಾಷ್ಟ್ರ ಸರ್ಕಾರವು ಯಾವುದೇ ವಿಶೇಷ ಸಂದರ್ಭಗಳನ್ನು ಹೊಂದಿಲ್ಲ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ಹೇಳಿದೆ.

ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ 50 ಎಂದು ನಿಗದಿಪಡಿಸಿದ್ದ 1992ರ ‘ಮಂಡಲ್’ ಆದೇಶವನ್ನು ಮರುಪರಿಶೀಲಿಸಬೇಕು ಎಂಬ ಮನವಿಯನ್ನೂ ಕೋರ್ಟ್ ತಿರಸ್ಕರಿಸಿದೆ. ವಿಶೇಷ ಸಂದರ್ಭಗಳಲ್ಲಿ ಮೀಸಲಾತಿಯ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸಿಕೊಳ್ಳಲು ರಾಜ್ಯಗಳಿಗೆ ಅನುಮತಿ ನೀಡುವುದೂ ಸೇರಿದಂತೆ ‘ಮಂಡಲ್’ ಆದೇಶದ ಮರುಪರಿಶೀಲನೆಯನ್ನು ಬೇರೊಂದು ದೊಡ್ಡ ನ್ಯಾಯಪೀಠಕ್ಕೆ ವರ್ಗಾಯಿಸಬೇಕು ಎಂಬ ಮನವಿಯನ್ನು ಪೀಠವು ಸರ್ವಾನುಮತದಿಂದ ತಳ್ಳಿಹಾಕಿದೆ.

ADVERTISEMENT

ಮರಾಠ ಸಮುದಾಯದವರಿಗೆ ಮೀಸಲಾತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಬಾಂಬೆ ಹೈಕೋರ್ಟ್ 2019ರ ಜೂನ್ 28ರಂದು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳ ಸಲ್ಲಿಕೆಯಾಗಿದ್ದವು.

ಮರಾಠರಿಗೆ ಮೀಸಲಾತಿ ನೀಡುವ ಮಸೂದೆಯನ್ನು 2018ರ ನವೆಂಬರ್ 30ರಂದು ಮಹಾರಾಷ್ಟ್ರ ಸರ್ಕಾರವು ಅಂಗೀಕರಿಸಿತ್ತು. ಹಾಲಿ ಇದ್ದ ಮೀಸಲಾತಿಗೆ ಹೆಚ್ಚುವರಿಯಾಗಿ ಮರಾಠ ಮೀಸಲಾತಿಯನ್ನು ಸರ್ಕಾರ ಸೇರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.