ADVERTISEMENT

ತಬ್ಲಿಗಿ ಕುರಿತ ಮಾಧ್ಯಮ ವರದಿ: ಅಭಿವ್ಯಕ್ತಿ ಸ್ವಾತಂತ್ರ್ಯ ದುರ್ಬಳಕೆ ಎಂದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 4:03 IST
Last Updated 9 ಅಕ್ಟೋಬರ್ 2020, 4:03 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ:‘ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ದುರ್ಬಳಕೆಯಾಗುತ್ತಿರುವ ಸ್ವಾತಂತ್ರ್ಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಒಂದು’ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ದೆಹಲಿಯ ನಿಜಾಮುದ್ದೀನ್ ಮಾರ್ಕಜ್‌ನಲ್ಲಿ ನಡೆದಿದ್ದ ತಬ್ಲಿಗಿ ಜಮಾತ್‌ನ ಕಾರಣದಿಂದ ಕೋವಿಡ್‌ ದೇಶದಾದ್ಯಂತ ಹರಡಿತು ಎಂದು ಮಾಧ್ಯಮಗಳು ಮಾಡಿದ್ದ ವರದಿಗಳ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ಅವರಿದ್ದ ತ್ರಿಸದಸ್ಯ ಪೀಠವು ಹೀಗೆ ಅಭಿಪ್ರಾಯಪಟ್ಟಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರು ಇದ್ದರು.

ಈ ವರದಿಗಳ ವಿರುದ್ಧ ಅರ್ಜಿ ಸಲ್ಲಿಸಿದ್ದ ಜಮೀಯತ್ ಉಲಮಾ ಐ–ಹಿಂದ್ ಸಂಘಟನೆ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್ ದವೆ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಪೀಠವು ಈ ಹೇಳಿಕೆ ನೀಡಿತು.

ADVERTISEMENT

ನಡೆದದ್ದೇನು:‘ಅಕ್ಷೇಪಾರ್ಹ ವರದಿಗಳು ಪ್ರಕಟವಾದುದರ ಬಗ್ಗೆ ಮತ್ತು ಪ್ರಸಾರವಾದುದರ ಬಗ್ಗೆ ಅರ್ಜಿದಾರರು ನಿಖರವಾದ ನಿದರ್ಶನಗಳನ್ನು ಒದಗಿಸಿಲ್ಲ. ಯಾವುದೇ ಸುದ್ದಿಸಂಸ್ಥೆ, ಪತ್ರಿಕೆ, ಸುದ್ದಿವಾಹಿನಿಯನ್ನು ಹೆಸರಿಸಿಲ್ಲ. ಇಂತಹ ಯಾವುದೇ ನಿದರ್ಶನಗಳು ಇಲ್ಲದೇ ಇರುವಾಗ ಕೇಬಲ್ ಟಿವಿ ನಿಯಮಗಳ ಅಡಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಸಂವಿಧಾನ ಕೊಡುವುದಿಲ್ಲ’ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ಪ್ರಮಾಣ ಪತ್ರದಲ್ಲಿ ಹೇಳಿತ್ತು.

‘ಅರ್ಜಿದಾರರ ಬೇಡಿಕೆಯಂತೆ ಎಲ್ಲಾ ಮಾಧ್ಯಮಗಳ ಮೇಲೆ ಸಾರಾಸಗಟಾಗಿ ನಿಷೇಧ ಹೇರುವುದರಿಂದ ದೇಶದ ನಾಗರಿಕರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ದೇಶದ ಬೇರೆಡೆ ಏನಾಗುತ್ತಿದೆ ಎಂದು ತಿಳಿದುಕೊಳ್ಳುವ ಸ್ವಾತಂತ್ರ್ಯವನ್ನು ಈ ಸ್ವರೂಪದ ನಿಷೇಧವು ಧ್ವಂಸ ಮಾಡುತ್ತದೆ. ಸಮಾಜಕ್ಕೆ ಮಾಹಿತಿ ನೀಡುವ ಪತ್ರಕರ್ತರ ಹಕ್ಕನ್ನೂ ಧ್ವಂಸ ಮಾಡುತ್ತದೆ’ ಎಂದೂ ಸಚಿವಾಲಯವು ತನ್ನ ಪ್ರಮಾಣಪತ್ರದಲ್ಲಿ ಕಳವಳ ವ್ಯಕ್ತಪಡಿಸಿತ್ತು.

ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ವಕೀಲರು,‘ಅರ್ಜಿದಾರರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಬಯಸುತ್ತಿದ್ದಾರೆ ಎಂದು ಸರ್ಕಾರವು ತನ್ನ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದೆ’ ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಯಾಗಿ ಪೀಠವು, ‘ಎಲ್ಲರಿಗೂ ಅವರು ಭಾವಿಸುವುದನ್ನು ಮತ್ತು ನಂಬುವುದನ್ನು ಹೇಳುವ ಸ್ವಾತಂತ್ರ್ಯವಿದೆ. ನಿಮಗೆ ಅನಿಸಿದ್ದನ್ನು ನೀವು ಹೇಳಿ, ಅವರಿಗೆ ಅನಿಸಿದ್ದನ್ನು ಅವರು ಹೇಳಲಿ. ಆದರೆ ಒಂದನ್ನಂತೂ ನಾವು ಖಂಡಿತಾ ಹೇಳಬೇಕಿದೆ. ಈಚಿನ ದಿನಗಳಲ್ಲಿ ಅತಿಹೆಚ್ಚು ದುರ್ಬಳಕೆ ಆದ ಸ್ವಾತಂತ್ರ್ಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಒಂದು’ ಎಂದು ಪೀಠವು ಹೇಳಿತು.

ಈ ವರ್ಷದ ಮಾರ್ಚ್‌ನಲ್ಲಿ ದೆಹಲಿಯ ನಿಜಾಮುದ್ದೀನ್ ಮಾರ್ಕೆಜ್‌ನಲ್ಲಿ ತಬ್ಲಿಗಿ‌‌ ಜಮಾತ್‌ ಸಭೆ ನಡೆದಿತ್ತು. ದೇಶದಲ್ಲಿ ಇನ್ನೂ ಕೋವಿಡ್‌ ಸೋಂಕು ಆರಂಭಿಕ ಹಂತದಲ್ಲಿ ಇದ್ದ ಅವಧಿ ಅದು. ತಬ್ಲಿಗಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದವರಿಂದಲೇ ದೇಶದಾದ್ಯಂತ ಕೋವಿಡ್‌ ಹರಡಿತು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಮೂಲಕ ಕೋಮು ದ್ವೇಷ ಮತ್ತು ಸುಳ್ಳುಸುದ್ದಿಯನ್ನು ಹರಡಿದ್ದವು. ಅಂತಹ ಮಾಧ್ಯಮಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಸಚಿವಾಲಯಕ್ಕೆ ತಾಕೀತು

ಈ ಅರ್ಜಿಗೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಹಿಂದಿನ ವಿಚಾರಣೆ ವೇಳೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪೀಠವು ನೋಟಿಸ್ ನೀಡಿತ್ತು. ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಆ ನೋಟಿಸ್‌ಗೆ ಪ್ರತಿಯಾಗಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಅವರು ಈ ಪ್ರಮಾಣ ಪತ್ರವನ್ನು ಸಲ್ಲಿಸಿದರು. ಇದಕ್ಕೆ ಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

‘ನೀವು ಈಗ ನ್ಯಾಯಾಲಯಕ್ಕೆ ನಡೆದುಕೊಳ್ಳುತ್ತಿರುವ ರೀತಿ ಇದೆಯಲ್ಲ, ಆ ರೀತಿ ನಡೆದುಕೊಳ್ಳಬಾರದು. ಒಬ್ಬ ಕಿರಿಯ ಅಧಿಕಾರಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇನ್ನೊಂದು ಪ್ರಮಾಣ ಪತ್ರ ಸಲ್ಲಿಸಿ. ಸಚಿವಾಲಯದ ಕಾರ್ಯದರ್ಶಿಯೇ ಪ್ರಮಾಣ ಪತ್ರ ಸಲ್ಲಿಸಬೇಕು’ ಎಂದು ಪೀಠವು ತಾಕೀತು ಮಾಡಿತು.

ಪ್ರಮಾಣಪತ್ರದಲ್ಲಿದ್ದ ಉತ್ತರಕ್ಕೂ ಪೀಠವು ಆಕ್ಷೇಪ ವ್ಯಕ್ತಪಡಿಸಿತು.

‘ದ್ವೇಷಪೂರಿತ ವರದಿಗಳಿಗೆ ನಿದರ್ಶನ ಒದಗಿಸಿಲ್ಲ ಎಂದಿದ್ದೀರಿ. ದ್ವೇಷಪೂರಿತ ವರದಿಗಳು ಪ್ರಸಾರವಾಗಿವೆ ಎಂಬುದನ್ನು ನೀವು ಒಪ್ಪಿಕೊಳ್ಳಬೇಕಿಲ್ಲ. ಆದರೆ, ದ್ವೇಷಪೂರಿತ ವರದಿಗಳು ಪ್ರಸಾರವಾಗಿವೆ ಎಂಬುದಕ್ಕೆ ನಿದರ್ಶನಗಳೇ ಇಲ್ಲ ಎಂದು ನೀವು ಹೇಗೆ ಹೇಳುತ್ತೀರಿ’ ಎಂದು ಪೀಠವು ತೀಕ್ಷ್ಣವಾಗಿ ಪ್ರಶ್ನಿಸಿತು.

‘ನಿಮ್ಮ ಪ್ರಮಾಣ ಪತ್ರವು ಅಸಂಬದ್ಧ ಮತ್ತು ಜಾರಿಕೆಯ ಉತ್ತರಗಳಿಂದ ಕೂಡಿದೆ. ಇದರಲ್ಲಿ ಅನಗತ್ಯ ವಿಷಯಗಳಿವೆ. ಮುಂದಿನ ಪ್ರಮಾಣ ಪತ್ರದಲ್ಲಿ ಹೀಗಿರಬಾರದು’ ಎಂದು ಪೀಠವು ತಾಕೀತು ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.