ADVERTISEMENT

ಹೈದರಾಬಾದ್ ಎನ್‌ಕೌಂಟರ್: ಸ್ವತಂತ್ರ ತನಿಖೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 11:18 IST
Last Updated 11 ಡಿಸೆಂಬರ್ 2019, 11:18 IST
   

ನವದೆಹಲಿ: ದೇಶದಾದ್ಯಂತ ತಲ್ಲಣ ಸೃಷ್ಟಿಸಿದ್ದ ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಎನ್‌ಕೌಂಟರ್ ಪ್ರಕರಣದತನಿಖೆಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೈಗೆತ್ತಿಕೊಳ್ಳಲಿದ್ದಾರೆ.

ಡಿಸೆಂಬರ್ 6ರಂದು ನಡೆದ ಎ‌ನ್‌ಕೌಂಟರ್ ಕುರಿತು ಸ್ವತಂತ್ರತನಿಖೆಗೆ ಒತ್ತಾಯಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಕರಣದ ಪ್ರತ್ಯೇಕ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ನೇಮಕಕ್ಕೆ ಒಪ್ಪಿಗೆ ಸೂಚಿಸಿದೆ.

ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಯಲು ಪೊಲೀಸರು ವಿಫಲರಾಗುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಲು ನಕಲಿ ಎನ್‌ಕೌಂಟರ್ ಮಾಡಲಾಗಿದೆ ಎಂದು ಆರೋಪಿಸಿ ವಕೀಲರಾದ ಜಿ.ಎಸ್. ಮಣಿ ಎಂಬುವರು ಸ್ವತಂತ್ರ ತನಿಖೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು.

ADVERTISEMENT

ಪಶುವೈದ್ಯೆ ಹತ್ಯೆಯಾದ ಸ್ಥಳಕ್ಕೆ ಮಹಜರು ನಡೆಸಲು ನಾಲ್ವರು ಆರೋಪಿಗಳನ್ನು ಕರೆತಂದಿದ್ದಾಗ ಅವರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದಾಗ ಎನ್‌ಕೌಂಟರ್ ಮಾಡಿದ್ದಾಗಿ ತೆಲಂಗಾಣ ಪೊಲೀಸರು ತಿಳಿಸಿದ್ದರು.

ಸುಪ್ರೀಂ ಕೋರ್ಟ್ ನಾಳೆ ಪೊಲೀಸರ ಎನ್‌ಕೌಂಟರ್ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ನೇಮಕದ ಆದೇಶವನ್ನು ನೀಡುತ್ತದೆ ಮತ್ತು ಅವರು ದೆಹಲಿಯಿಂದಲೇ ಕೆಲಸ ಮಾಡುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಹೇಳಿದ್ದಾರೆ.

ಈಗಾಗಲೇ ತೆಲಂಗಾಣ ಹೈಕೋರ್ಟ್ ಈ ಪ್ರಕರಣದತ್ತ ಗಮನ ಹರಿಸಿರುವುದು ಸುಪ್ರೀಂ ಗಮನಕ್ಕೂ ಬಂದಿದೆ. ವಾರಾಂತ್ಯದಲ್ಲಿ ಅಪರಾಧಗಳ ನ್ಯಾಯ ವ್ಯವಸ್ಥೆಯ ಸಡಿಲತೆ ಮತ್ತು ಅಪರಾಧ ವಿಷಯಗಳನ್ನು ವಿಲೇವಾರಿ ಮಾಡಲು ತೆಗೆದುಕೊಂಡ ಸಮಯವನ್ನು ಮರುಪರಿಶೀಲಿಸಬೇಕು. ನ್ಯಾಯವು ಎಂದಿಗೂ ತ್ವರಿತವಾಗಿರಲು ಸಾಧ್ಯವಿಲ್ಲ ಮತ್ತು ಒಂದು ವೇಳೆ ಅದು ಪ್ರತೀಕಾರವಾಗಿ ಬದಲಾದರೆ 'ನ್ಯಾಯವು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.