ADVERTISEMENT

ನೌಕರಿ ಕಾಯಮಾತಿ ನಿರಾಕರಣೆಗೆ ಆರ್ಥಿಕ ಮಿತಿ ‘ತಾಯತ’ ಆಗಬಾರದು: ‘ಸುಪ್ರೀಂ’

ಪಿಟಿಐ
Published 19 ಆಗಸ್ಟ್ 2025, 16:21 IST
Last Updated 19 ಆಗಸ್ಟ್ 2025, 16:21 IST
–
   

ನವದೆಹಲಿ: ಹಲವು ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಾ ಬಂದಿರುವ ದಿನಗೂಲಿ ನೌಕರರ ಸೇವೆ ಕಾಯಂಗೊಳಿಸದಿರುವುದಕ್ಕೆ ಆರ್ಥಿಕ ಮಿತಿಯನ್ನು ಒಂದು ‘ತಾಯತ ರಕ್ಷಾ ಕವಚ’ದಂತೆ ಬಳಕೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

‘ಸರ್ಕಾರವು (ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ) ಸಾಂವಿಧಾನಿಕವಾದ ಉದ್ಯೋಗದಾತ. ಸಾರ್ವಜನಿಕ ವಿಚಾರಗಳಿಗೆ ಸಂಬಂಧಿಸಿ ಮೂಲಭೂತ ಕಾರ್ಯಗಳನ್ನು ನಿರ್ವಹಿಸುವ ದಿನಗೂಲಿಗಳಿಗೆ ತಕ್ಕ ವೇತನ ನಿರಾಕರಿಸುವ ಮೂಲಕ ಬಜೆಟ್‌ನಲ್ಲಿ ಸಮತೋಲನೆ ಕಾಪಾಡಿಕೊಳ್ಳುವ ಪ್ರಯತ್ನಗಳನ್ನು ಸರ್ಕಾರ ಮಾಡಬಾರದು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ವಿಕ್ರಮನಾಥ್‌ ಹಾಗೂ ಸಂದೀಪ್‌ ಮೆಹ್ತಾ ಅವರು ಇದ್ದ ನ್ಯಾಯಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.

ADVERTISEMENT

ತಮ್ಮ ಸೇವೆ ಕಾಯಂಗೊಳಿಸುವಂತೆ ಕೋರಿ ಉತ್ತರ ಪ್ರದೇಶ ಉನ್ನತ ಶಿಕ್ಷಣ ಸೇವೆಗಳ ಆಯೋಗದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರ ಮನವಿಯನ್ನು ಸರ್ಕಾರ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ನೌಕರರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ತಿರಸ್ಕರಿಸಿ ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ದಿನಗೂಲಿ ನೌಕರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅಲಹಾಬಾದ್‌ ಹೈಕೋರ್ಟ್‌ ಆದೇಶವನ್ನು ರದ್ದುಪಡಿಸಿತು. 

2002ರ ಏಪ್ರಿಲ್‌ 24ರಿಂದ ಅನ್ವಯವಾಗುವಂತೆ ಅರ್ಜಿದಾರರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.