ADVERTISEMENT

ಪೆಗಾಸಸ್ ಗೂಢಚರ್ಯೆ: ತನಿಖೆ ಕುರಿತಂತೆ ನಾಳೆ ಸುಪ್ರೀಂ ಕೋರ್ಟ್ ತೀರ್ಪು

ಪಿಟಿಐ
Published 26 ಅಕ್ಟೋಬರ್ 2021, 11:02 IST
Last Updated 26 ಅಕ್ಟೋಬರ್ 2021, 11:02 IST
ಐಸ್ಟಾಕ್: ಪ್ರಾತಿನಿಧಿಕ ಚಿತ್ರ
ಐಸ್ಟಾಕ್: ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಪೆಗಾಸಸ್’ ಗೂಢಚರ್ಯೆ ತಂತ್ರಾಂಶ ಬಳಸಿಕೊಂಡು ರಾಜಕಾರಣಿಗಳು, ಪತ್ರಕರ್ತರು ಹಾಗೂ ಮತ್ತಿತರರ ಫೋನ್‌ಗಳನ್ನು ಹ್ಯಾಕ್‌ ಮಾಡಿ, ಅವರ ಮೇಲೆ ಕಣ್ಗಾವಲು ಇಡಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆ ಕುರಿತಂತೆ ತನಿಖೆ ನಡೆಸಬೇಕೆ? ಎಂಬ ಬಗ್ಗೆ ನಾಳೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲಿದೆ.

ಪೆಗಾಸಸ್ ಹಗರಣದ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಗಳ ಮೇಲಿನ ಆದೇಶವನ್ನುಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಸೆಪ್ಟೆಂಬರ್ 13 ರಂದು ಕಾಯ್ದಿರಿಸಿತ್ತು, ಕೇಂದ್ರವು ಪೆಗಾಸಸ್ ಸ್ಪೈವೇರ್ ಅನ್ನು ಕಾನೂನುಬಾಹಿರ ವಿಧಾನಗಳ ಮೂಲಕ ನಾಗರಿಕರ ಮೇಲೆ ಗೂಢಚರ್ಯೆ ನಡೆಸಲು ಬಳಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ತಿಳಿಯಬೇಕಿದೆ ಎಂದು ಪೀಠ ಹೇಳಿದೆ.

ರಾಷ್ಟ್ರೀಯ ಭದ್ರತೆಯನ್ನು ಉಲ್ಲೇಖಿಸಿ, ಈ ವಿಷಯದಲ್ಲಿ ವಿವರವಾದ ಅಫಿಡವಿಟ್ ಸಲ್ಲಿಸಲು ಕೇಂದ್ರ ನಿರಾಕರಿಸಿದೆ.

ADVERTISEMENT


ಇಸ್ರೇಲ್ ಸಂಸ್ಥೆ ಎನ್‌ಎಸ್ಒನ ಸ್ಪೈವೇರ್ ಪೆಗಾಸಸ್ ಅನ್ನು ಬಳಸಿಕೊಂಡು ಪ್ರಸಿದ್ಧ ನಾಗರಿಕರು, ರಾಜಕಾರಣಿಗಳು ಮತ್ತು ಲೇಖಕರ ಮೇಲೆ ಸರ್ಕಾರಿ ಏಜೆನ್ಸಿಗಳು ಗೂಢಚರ್ಯೆ ಮಾಡಿದ ಆರೋಪದ ವರದಿಗಳ ಮೇಲೆ ಸ್ವತಂತ್ರ ತನಿಖೆ ನಡೆಸಲು ಅರ್ಜಿಗಳಲ್ಲಿ ಕೋರಲಾಗಿದೆ.

300 ಕ್ಕೂ ಹೆಚ್ಚು ಪರಿಶೀಲಿಸಿದ ಭಾರತೀಯ ಮೊಬೈಲ್ ಫೋನ್ ಸಂಖ್ಯೆಗಳು ಪೆಗಾಸಸ್ ಸ್ಪೈವೇರ್ ಬಳಸಿ ಕಣ್ಗಾವಲು ಇರಿಸಲಾಗಿರಬಹುದಾದ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿವೆ ಎಂದು ಅಂತರರಾಷ್ಟ್ರೀಯ ಮಾಧ್ಯಮ ಒಕ್ಕೂಟ ವರದಿ ಮಾಡಿದೆ.

ಕರ್ನಾಟಕದಲ್ಲು ಸಮ್ಮಿಶ್ರ ಸರ್ಕಾರ ಪತನದ ಸಂದರ್ಭ ಪೆಗಾಸಸ್ ಗೂಢಚರ್ಯೆ ನಡೆದಿರುವ ಆರೋಪ ಕೇಳಿಬಂದಿತ್ತು. ಅಂದಿನ ಸಿಎಂ, ಡಿಸಿಎಂ ಮತ್ತು ಕಾಂಗ್ರೆಸ್‌ನ ಕೆಲ ಮುಖಂಡರ ದೂರವಾಣಿ ಸಂಖ್ಯೆಗಳು ಸಹ ಪಟ್ಟಿಯಲ್ಲಿ ಇವೆ ಎಂದು ವರದಿಯಾಗಿತ್ತು.

ಸೈಬರ್‌ ಅಸ್ತ್ರಗಳನ್ನು ಸೃಷ್ಟಿಸುತ್ತಿರುವ ಇಸ್ರೇಲ್‌ ಮೂಲದ ಕಂಪನಿಯು ಪೆಗಾಸಸ್‌ ಕು–ತಂತ್ರಾಂಶವನ್ನೂ ಅಭಿವೃದ್ಧಿ ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.