
ನವದೆಹಲಿ: ಸಾರ್ವಜನಿಕ ಹಿತಾಸಕ್ತಿಯ ಪ್ರಕರಣಗಳಲ್ಲಿ ಉತ್ತರದಾಯಿತ್ವ ಮತ್ತು ದಕ್ಷತೆಯನ್ನು ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್, ‘ವ್ಯಾಜ್ಯಗಳಲ್ಲಿ ಸರ್ಕಾರದ ವಿಳಂಬಗಳನ್ನು ಹೈಕೋರ್ಟ್‌ಗಳು ಕ್ಷಮಿಸಬಾರದು’ ಎಂದು ನಿರ್ದೇಶನ ನೀಡಿದೆ.
ಸರ್ಕಾರದ ನಿರ್ಲಕ್ಷ್ಯ ಮತ್ತು ಆಲಸಿತನಕ್ಕೆ ಹೈಕೋರ್ಟ್‌ಗಳು ಬೆಲೆಕೊಡಬಾರದು ಎಂದಿರುವ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಆರ್.ಮಹದೇವನ್ ಅವರ ಪೀಠವು, ‘ಸರ್ಕಾರದ ಮನವಿಗೆ ಸ್ಪಂದಿಸಿ ಹೈಕೋರ್ಟ್ ಹಲವು ಹಿಂದಿನ ಪ್ರಕರಣಗಳ ವಿಚಾರಣೆ ಮರು ಆರಂಭಿಸಿ, ಸಾಮಾನ್ಯ ಜನರನ್ನು ನಿರಂತರವಾಗಿ ವ್ಯಾಜ್ಯಗಳಿಗೆ ಎಳೆದು ತರುತ್ತಿರುವುದು ಸರಿಯಲ್ಲ’ ಎಂದು ಕಟುವಾಗಿ ಹೇಳಿದೆ.
‘ಸುದೀರ್ಘ ವಿಳಂಬದ ಪ್ರಕರಣಗಳಿಗೆ ಸೂಕ್ತ ಕಾರಣಗಳಿಲ್ಲದೆ ವಿಚಾರಣೆಗೆ ಅವಕಾಶ ನೀಡಬಾರದು ಎಂದು ಎಲ್ಲ ಹೈಕೋರ್ಟ್‌ಗಳಿಗೆ ಸೂಚನೆ ನೀಡಲು ನಮಗೆ ನೋವುಂಟಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
ಸಿವಿಲ್ ಪ್ರಕರಣವೊಂದರಲ್ಲಿ ತೀರ್ಪು ಹೊರಬಿದ್ದ 3,966 ದಿನಗಳು ಅಂದರೆ ಸುಮಾರು 11 ವರ್ಷಗಳ ವಿಳಂಬದ ನಂತರ ಎರಡನೇ ಮೇಲ್ಮನವಿ ಸಲ್ಲಿಕೆಗೆ ಕರ್ನಾಟಕ ಗೃಹ ಮಂಡಳಿ ಮಾಡಿದ ಮನವಿಯನ್ನು ಪರಿಗಣಿಸಿದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿದೆ. 170 ಪುಟಗಳ ತೀರ್ಪಿನಲ್ಲಿ ನ್ಯಾಯಪೀಠವು ಹೈಕೋರ್ಟ್‌ಗೆ ಛೀಮಾರಿ ಹಾಕಿದೆ.
‘ಸರ್ಕಾರಿ ಇಲಾಖೆಗಳು ವಿಳಂಬಕ್ಕಾಗಿ ನೈಜ ವಿವರಣೆಯ ಬದಲಿಗೆ, ಆಡಳಿತಾತ್ಮಕ ವಿಳಂಬಗಳು ಅಥವಾ ಅಧಿಕಾರಿಗಳ ಆಲಸಿತನದ ಕಾರಣ ನೀಡುತ್ತವೆ. ಸರ್ಕಾರದ ಅಸಮರ್ಥತೆಯನ್ನು ಪರಿಗಣಿಸದೆ, ಉತ್ತರದಾಯಿತ್ವ ಶಿಸ್ತು ಮತ್ತು ಹೊಣೆಗಾರಿಕೆಯನ್ನು ಪರಿಗಣಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿಯನ್ನು ಉತ್ತಮವಾಗಿ ಕಾಪಾಡಲು ಸಾಧ್ಯ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಛೀಮಾರಿ ಹಾಕಿತ್ತು.
ಕರ್ನಾಟಕ ಗೃಹ ಮಂಡಳಿಯು 11 ವರ್ಷಗಳ ವಿಳಂಬದ ನಂತರ ಮೇಲ್ಮನವಿ ಸಲ್ಲಿಸಲು ಅವಕಾಶ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿದಂತೆ ಹಲವು ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದ ಮೇಲ್ಮನವಿ ಸಲ್ಲಿಕೆ ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡಿತ್ತು. ಈ ಅಧಿಕಾರಿಗಳಿಗೆ 2006ರಿಂದ ನಿರಂತರವಾಗಿ ಜ್ಞಾಪಿಸಿದರೂ ಮೇಲ್ಮನವಿ ಸಲ್ಲಿಸಲು ಸೂಕ್ತ ದಾಖಲೆಗಳನ್ನು ಒದಗಿಸಲಿಲ್ಲ ಎಂದು ಗೃಹ ಮಂಡಳಿ ತಿಳಿಸಿತ್ತು.
ಆದರೆ, ಸಂಬಂಧಿಸಿದ ಎಂಜಿನಿಯರ್ ವಿರುದ್ಧ 2017ರ ಮಾರ್ಚ್ ತಿಂಗಳಲ್ಲಿ ಅಂದರೆ, ವಿಳಂಬಕ್ಕೆ ಕ್ಷಮೆ ಕೋರಿ ಮೇಲ್ಮನವಿ ಸಲ್ಲಿಸುವ ತಿಂಗಳ ಮೊದಲಷ್ಟೇ ಕ್ರಮ ಕೈಗೊಳ್ಳಲಾಗಿದೆ ಎಂಬುದು ಅಚ್ಚರಿ ಮೂಡಿಸಿದೆ. ತಮ್ಮ ತಪ್ಪು ಮುಚ್ಚಿಹಾಕಲು ಅಧಿಕಾರಿಯನ್ನು ಬಲಿಪಶು ಮಾಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ತೀಕ್ಷ್ಣ ಪದಗಳಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ವಿಳಂಬವನ್ನು ಕ್ಷಮಿಸುವುದು ಅಪರೂಪದ ಪ್ರಕರಣಗಳಿಗೆ ಸೀಮಿತವಾಗಬೇಕು. ಅದೇ ನಿಯಮವಾಗಬಾರದು. ಸರ್ಕಾರಿ ವ್ಯಾಜ್ಯಗಳನ್ನು ಕೂಡ ಖಾಸಗಿ ವ್ಯಾಜ್ಯಗಳ ರೀತಿಯಲ್ಲಿಯೇ ಪರಿಗಣಿಸಬೇಕು ಎಂದು ಕಿವಿಮಾತು ಹೇಳಿದೆ.
ಸೂಕ್ತ ಕಾರಣಗಳಿಲ್ಲದೆ, ಕೇವಲ ಅರ್ಜಿದಾರರ ಗುರುತಿನ ಆಧಾರದ ಮೇಲೆ ವಿಳಂಬವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಮಿತಿಯ ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ರಾಜ್ಯಕ್ಕೆ ವಿಶೇಷ ಪರಿಗಣನೆಯ ಅವಕಾಶವಿದೆ ಎಂಬ ವಾದವನ್ನು ತಿರಸ್ಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.