ನವದೆಹಲಿ: ನ್ಯಾಯಾಂಗಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ರಾಜಕೀಯಗೊಳಿಸುವುದರ ವಿರುದ್ಧ ಸುಪ್ರೀಂ ಕೋರ್ಟ್ ಸೋಮವಾರ ಎಚ್ಚರಿಕೆ ನೀಡಿದೆ.
ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದ ತೀರ್ಪಿನ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆಗಳಿಗೆ ಅವರ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಸಮಯದಲ್ಲಿ ಈ ಹೇಳಿಕೆ ನೀಡಿದೆ.
‘ನಿಮ್ಮ ರಾಜಕೀಯ ಹೋರಾಟವನ್ನು ದಯವಿಟ್ಟು ಈ ನ್ಯಾಯಾಲಯದ ಹೊರಗೆ ಮಾಡಿ’ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ ಹೇಳಿತು.
ಮಮತಾ ಅವರು ನ್ಯಾಯಾಂಗದ ಅಧಿಕಾರವನ್ನು ದುರ್ಬಲಗೊಳಿಸುವ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಆತ್ಮದೀಪ್ ಚಾರಿಟಬಲ್ ಟ್ರಸ್ಟ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸುತ್ತಿದೆ.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಮಣಿಂದರ್ ಸಿಂಗ್, ವಿಚಾರಣೆಯನ್ನು ಮುಂದೂಡುವಂತೆ ಪೀಠವನ್ನು ಒತ್ತಾಯಿಸಿದರಲ್ಲದೆ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸಲು ಒಪ್ಪಿಗೆ ನೀಡುವಂತೆ ಅಟಾರ್ನಿ ಜನರಲ್ ಅವರಿಗೆ ಮನವಿಯನ್ನು ಕಳುಹಿಸಲಾಗಿದೆ ಎಂದರು.
ಅದಕ್ಕೆ ಸಿಜೆಐ, ‘ಒಪ್ಪಿಗೆ ಸಿಗಲಿದೆ ಎಂಬುದು ನಿಮಗೆ ಖಚಿತವಾಗಿದೆಯೇ? ನ್ಯಾಯಾಲಯದ ಮುಂದೆ ರಾಜಕೀಯ ತರಲು ಪ್ರಯತ್ನಿಸಬೇಡಿ. ನಿಮ್ಮ ರಾಜಕೀಯ ಹೋರಾಟವನ್ನು ಬೇರೆ ಎಲ್ಲಾದರೂ ಮಾಡಿ’ ಎಂದು ತರಾಟೆಗೆ ತೆಗೆದುಕೊಂಡರು. ಪೀಠವು ವಿಚಾರಣೆಯನ್ನು ನಾಲ್ಕು ವಾರಗಳ ಅವಧಿಗೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.