ADVERTISEMENT

ಜಾರಿ ನಿರ್ದೇಶನಾಲಯ ವಂಚಕನಂತೆ ವರ್ತಿಸಬಾರದು: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 15:46 IST
Last Updated 7 ಆಗಸ್ಟ್ 2025, 15:46 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ಜಾರಿ ನಿರ್ದೇಶನಾಲಯವು ವಂಚಕನಂತೆ ವರ್ತಿಸದೇ ಕಾನೂನಿನ ಚೌಕಟ್ಟಿಗೆ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಳ್ಳಬೇಕು’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣಗಳ ಪೈಕಿ ಕೆಲವೇ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗಿರುವ ಕಾರಣದಿಂದ ಸುಪ್ರೀಂ ಕೋರ್ಟ್‌ ಈ ವಿಚಾರ ಪ್ರಸ್ತಾಪಿಸಿದೆ. 

ಅಕ್ರಮ ಹಣ ವರ್ಗಾವಣೆ ಪ್ರಕರಣಗಳ (ಪಿಎಂಎಲ್‌ಎ) ತನಿಖೆಯಲ್ಲಿ ಆರೋಪಿಗಳನ್ನು ಬಂಧಿಸಲು ಜಾರಿ ನಿರ್ದೇಶನಾಲಯ ಹೊಂದಿರುವ ಅಧಿಕಾರವನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್‌ನ 2022ರ ತೀರ್ಪಿನ ಪುನರ್‌ ಪರಿಶೀಲನೆಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಹಾಗೂ ಉಜ್ಜಲ್‌ ಭುಯಾನ್‌, ಕೋಟಿಶ್ವರ್‌ ಸಿಂಗ್‌ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. 

ADVERTISEMENT

ಈ ವೇಳೆ ಕೇಂದ್ರ ಸರ್ಕಾರ ಮತ್ತು ಇ.ಡಿ. ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ಅವರು ತೀರ್ಪಿನ ಪುನರ್‌ ಪರಿಶೀಲನೆ ಕೋರಿರುವ ಅರ್ಜಿಗಳ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಅಲ್ಲದೇ, ‘ಪ್ರಭಾವಿ ಆರೋಪಿಗಳು ಈ ರೀತಿ ಅರ್ಜಿ ಸಲ್ಲಿಸುವ ತಂತ್ರ ಹೂಡುವುದರಿಂದ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಲ್ಲಿ ವಿಳಂಬವಾಗುತ್ತಿದೆ’ ಎಂದಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ಭುಯಾನ್‌ ತಾವೇ ತೀರ್ಪು ನೀಡಿದ್ದ ಪ್ರಖರಣವೊಂದನ್ನು ಉಲ್ಲೇಖಿಸಿ, ‘ಇ.ಡಿ ಕೂಡ ವಂಚಕನ ರೀತಿ ವರ್ತಿಸದೇ ಕಾನೂನಿನ ಚೌಕಟ್ಟಿನಲ್ಲಿರಬೇಕು. ಕಳೆದ 5 ವರ್ಷದಲ್ಲಿ 5000 ಪ್ರಕರಣಗಳನ್ನು ಇ.ಡಿ ದಾಖಲಿಸಿದೆ. ಆದರೆ, ಕೇವಲ ಶೇ 10ರಷ್ಟು ಪ್ರಕರಣಗಳಲ್ಲಿ ಶಿಕ್ಷೆ ಪ್ರಟಕವಾಗಿದೆ. 5–6 ವರ್ಷಗಳ ಕಾಲ ವ್ಯಕ್ತಿಯೊಬ್ಬ ನ್ಯಾಯಾಂಗ ಬಂಧನದಲ್ಲಿದ್ದು ನಂತರ ಖುಲಾಸೆ ಆದರೆ ಅದಕ್ಕೆ ಹೊಣೆ ಯಾರು? ಇದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರ. ಹೀಗಾಗಿಯೇ ನೀವು ತನಿಖಾ ವೈಖರಿಯನ್ನು ಉತ್ತಮ ಪಡಿಸಿಕೊಳ್ಳಿ ಎಂದು ನಾವು ಹೇಳುತ್ತಿದ್ದೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.