ADVERTISEMENT

‘ಸಮಾಜ, ಕಾನೂನಿನಿಂದಲೇ ಸಂತ್ರಸ್ತೆಗೆ ಸಂಕಟ’

ಪೋಕ್ಸೊ ಪ್ರಕರಣ: ‘ಸುಪ್ರೀಂ’ನಿಂದ ಮಹತ್ವದ ತೀರ್ಪು * 142ನೇ ವಿಧಿಯಡಿ ವಿಶೇಷಾಧಿಕಾರ ಬಳಕೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 16:19 IST
Last Updated 23 ಮೇ 2025, 16:19 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಪೋಕ್ಸೊ ಕಾಯ್ದೆಯಡಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಗೆ ಪ್ರಕರಣದ ವಿಶಿಷ್ಟ ಸಂದರ್ಭಗಳನ್ನು ಉಲ್ಲೇಖಿಸಿ ಯಾವುದೇ ಶಿಕ್ಷೆ ವಿಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಅಭಯ್‌ ಎಸ್‌.ಓಕಾ ಮತ್ತು ಉಜ್ಜಲ್‌ ಭುಯಾನ್‌ ಅವರ ಪೀಠವು, ಸಂವಿಧಾನದ 142ನೇ ವಿಧಿ ಅಡಿಯಲ್ಲಿ ಇರುವ ವಿಶೇಷಾಧಿಕಾರ ಬಳಸಿ ಈ ನಿರ್ಧಾರ ತೆಗೆದುಕೊಂಡಿದೆ.

ಬಾಲಕಿಯ ಜತೆಗೆ ಲೈಂಗಿಕ ಸಂಬಂಧ ಹೊಂದಿದ್ದ ಅಪರಾಧಕ್ಕಾಗಿ ವ್ಯಕ್ತಿಯೊಬ್ಬ ಶಿಕ್ಷೆಗೆ ಗುರಿಯಾಗಿದ್ದನು. ಅಪರಾಧದ ಸಮಯದಲ್ಲಿ (2018) ಆ ವ್ಯಕ್ತಿಗೆ 24 ವರ್ಷ ವಯಸ್ಸಾಗಿತ್ತು. ಬಾಲಕಿಗೆ 14 ವರ್ಷವಾಗಿತ್ತು. ಆಕೆಯು ಪ್ರೌಢಾವಸ್ಥೆಗೆ ತಲುಪಿದ ಬಳಿಕ, ಆತನೇ ವಿವಾಹವಾಗಿದ್ದನು. ಈ ದಂಪತಿಗೀಗ ಮಗುವಿದ್ದು, ಒಟ್ಟಿಗೆ ವಾಸ ಮಾಡುತ್ತಿದ್ದಾರೆ.

ADVERTISEMENT

ಸಂತ್ರಸ್ತೆಯ ಸ್ಥಿತಿ–ಗತಿ, ಮನೋ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಪರೀಕ್ಷಿಸಲು ಸುಪ್ರೀಂ ಕೋರ್ಟ್‌ ಮನಃಶಾಸ್ತ್ರಜ್ಞರು ಮತ್ತು ಸಾಮಾಜಿಕ ವಿಜ್ಞಾನಿಗಳನ್ನು ಒಳಗೊಂಡ ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ನೀಡಿದ ವರದಿಯನ್ನು ಆಧರಿಸಿ ಪೀಠ ಮಹತ್ವದ ತೀರ್ಪು ನೀಡಿದೆ.

ಸಮಾಜದಿಂದಲೇ ಹೆಚ್ಚಿನ ನೋವು:

‘ಸಮಾಜ ತನ್ನನ್ನು ನೋಡಿದ ದೃಷ್ಟಿಯಿಂದ ಸಂತ್ರಸ್ತೆ ಹೆಚ್ಚಾಗಿ ನೊಂದಿದ್ದಾಳೆ. ತನ್ನದೇ ಕುಟುಂಬ ಸಹ ಆಕೆಯ ಕೈಬಿಟ್ಟಿತ್ತು. ಕಾನೂನು ವ್ಯವಸ್ಥೆಯೂ ಆಕೆಯನ್ನು ಸೋಲುವಂತೆ ಮಾಡಿತು’ ಎಂಬ ಅಂಶಗಳನ್ನು ಪೀಠ ಗಂಭೀರವಾಗಿ ಪರಿಗಣಿಸಿತು.

‘ಸಂತ್ರಸ್ತೆ ಈಗ ವಯಸ್ಕಳಾಗಿದ್ದಾಳೆ. ಆಕೆ ಈ ಘಟನೆಯನ್ನು ಅಪರಾಧ ಎಂದು ಪರಿಗಣಿಸಿಲ್ಲ. ಅದು ಕಾನೂನು ಪ್ರಕಾರ ಅಪರಾಧವಾಗಿದ್ದರೂ, ಸಂತ್ರಸ್ತೆ ಅದನ್ನು ಹಾಗೆ ಸ್ವೀಕರಿಸಿಲ್ಲ. ಆಕೆಗೆ ಆಘಾತ ಉಂಟುಮಾಡಿದ್ದು ಈ ಅಪರಾಧವಲ್ಲ, ಬದಲಿಗೆ ಆ ನಂತರದ ಪರಿಣಾಮಗಳು. ಪೊಲೀಸ್‌, ಕಾನೂನು ವ್ಯವಸ್ಥೆ, ಆರೋಪಿಯನ್ನು ಶಿಕ್ಷೆಯಿಂದ ರಕ್ಷಿಸಲು ನಡೆಸಬೇಕಾದ ಹೋರಾಟದಿಂದ ಆಕೆ ರೋಸಿಹೋಗಿದ್ದಾಳೆ. ಈ ಸಂಗತಿಗಳು ಎಲ್ಲರ ಕಣ್ಣುಗಳನ್ನು ತೆರೆಸುವಂತಿವೆ’ ಎಂದು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಪೂರ್ಣ ನ್ಯಾಯಕ್ಕಾಗಿ ವಿಶೇಷ ಅಧಿಕಾರ:

ಶಿಕ್ಷೆಗೆ ಒಳಗಾದ ವ್ಯಕ್ತಿ ಜತೆಗೆ ಸಂತ್ರಸ್ತೆಯ ಭಾವನಾತ್ಮಕ ಬಾಂಧವ್ಯ ಮತ್ತು ಅವರ ಈಗಿನ ಕೌಟುಂಬಿಕ ಜೀವನ ಸೇರಿದಂತೆ ಅಸಾಧಾರಣ ಸಂದರ್ಭಗಳನ್ನು ಪರಿಗಣಿಸಿ, ಆಕೆಗೆ ಸಂಪೂರ್ಣ ನ್ಯಾಯ ಒದಗಿಸಲು 142ನೇ ವಿಧಿಯಡಿ ವಿಶೇಷ ಅಧಿಕಾರವನ್ನು ಬಳಸಿರುವುದಾಗಿ ಪೀಠ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತ ಹೈಕೋರ್ಟ್‌ 2023ರಲ್ಲಿ ವ್ಯಕ್ತಿಯನ್ನು 20 ವರ್ಷಗಳ ಶಿಕ್ಷೆಯಿಂದ ಖುಲಾಸೆಗೊಳಿಸಿತ್ತು. ಈ ವೇಳೆ ಅದು ನೀಡಿದ್ದ ವಿವಾದಾತ್ಮಕ ಅಭಿಪ್ರಾಯಗಳಿಂದಾಗಿ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.

ಹದಿಹರಿಯದ ಬಾಲಕಿ ‘ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಬೇಕು. ಸಮಾಜವು ಅಂತಹ ಘಟನೆಗಳಲ್ಲಿ ಆಕೆಯನ್ನು ಸೋತವಳು ಎಂದು ಪರಿಗಣಿಸುತ್ತದೆ’ ಎಂದು ಹೈಕೋರ್ಟ್‌ ಉಲ್ಲೇಖಿಸಿತ್ತು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. 

ಈ ಪ್ರಕರಣದ ವಿಚಾರಣೆಯನ್ನು 2024ರ ಆಗಸ್ಟ್‌ 20ರಂದು ನಡೆಸಿದ ಸುಪ್ರೀಂ ಕೋರ್ಟ್‌ ಕಲ್ಕತ್ತ ಹೈಕೋರ್ಟ್‌ ತೀರ್ಪನ್ನು ರದ್ದುಗೊಳಿಸಿ, ವ್ಯಕ್ತಿಯ ಶಿಕ್ಷೆಯನ್ನು ಮರುಸ್ಥಾಪಿಸಿತ್ತು. ಆದರೆ, ಶಿಕ್ಷೆ ಜಾರಿಗೂ ಮುನ್ನ ಸಂತ್ರಸ್ತೆಯ ಮನಃಸ್ಥಿತಿ ಮತ್ತು ಆಕೆಯ ಅಭಿಪ್ರಾಯಗಳನ್ನು ತಿಳಿದು ಮೌಲ್ಯಮಾಪನ ನಡೆಸಲು ನಿಮ್ಹಾನ್ಸ್‌ ಅಥವಾ ಟಿಐಎಸ್‌ಎಸ್‌ನಂತಹ ಸಂಸ್ಥೆಗಳ ಸದಸ್ಯರು ಸೇರಿದಂತೆ ಮಕ್ಕಳ ಕಲ್ಯಾಣ ಅಧಿಕಾರಿಗಳಿರುವ ತಜ್ಞರ ಸಮಿತಿ ರಚಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶಿಸಿತ್ತು. 

ಸಮಿತಿ ಏಪ್ರಿಲ್‌ 3 ರಂದು ವರದಿಯನ್ನು ನೀಡಿತ್ತು. ಸಂತ್ರಸ್ತೆಯು ಆರೋಪಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾಳೆ ಮತ್ತು ತನ್ನ ಪುಟ್ಟ ಕುಟಂಬದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾಳೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.