ADVERTISEMENT

ಕೇರಳದಲ್ಲಿ ವಿದ್ಯಾರ್ಥಿಗೆ ನಿಫಾ ವೈರಸ್ ಸೋಂಕು ಶಂಕೆ 

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 10:13 IST
Last Updated 3 ಜೂನ್ 2019, 10:13 IST
   

ಕೊಚ್ಚಿ: ಕೇರಳದ ಎರ್ನಾಕುಳಂ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯಲ್ಲಿರುವ ವಿದ್ಯಾರ್ಥಿಯೊಬ್ಬನಿಗೆ ನಿಫಾ ವೈರಸ್ ಸೋಂಕು ತಗಲಿದೆ ಎಂದು ವೈದ್ಯರು ಸಂದೇಹ ವ್ಯಕ್ತ ಪಡಿಸಿದ್ದಾರೆ. ಆದರೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಜತೆ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೈ. ಸಫರುಲ್ಲಾ ಹೇಳಿದ್ದಾರೆ.

ಕೇರಳ ನಿಫಾ ಸೋಂಕು ಭೀತಿಯಲ್ಲಿದ್ದು, ಈಗಾಗಲೇ 50 ಮಂದಿ ರೋಗಿಗಳ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಲಾಗಿದೆ.

ಅಂದಹಾಗೆ ವಿದ್ಯಾರ್ಥಿಗೆ ನಿಫಾ ವೈರಸ್ ಸೋಂಕು ಇದೆ ಎಂದು ದೃಢೀಕರಿಸಿಲ್ಲ. ಆದರೆ ರಾಜ್ಯದಾದ್ಯಂತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ADVERTISEMENT

ಸಿಫಾ ಬಾಧಿತ ಎಂದು ಶಂಕೆ ಇರುವ ವಿದ್ಯಾರ್ಥಿಯ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಎರ್ನಾಕುಳಂ ಜಿಲ್ಲಾ ವೈದ್ಯಾಧಿಕಾರಿ ಎನ್.ಕೆ. ಕುಟ್ಟಪ್ಪನ್ ಹೇಳಿದ್ದಾರೆ.

ಎರ್ನಾಕುಳಂ, ತ್ರಿಶ್ಶೂರ್, ಕಳಮಶ್ಶೇರಿ, ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಐಸೋಲೇಷನ್ ವಾರ್ಡ್‌ಗಳನ್ನು ಸಿದ್ಧ ಪಡಿಸಲಾಗಿದೆ.

ಚಿಕಿತ್ಸೆಯಲ್ಲಿರುವ ವಿದ್ಯಾರ್ಥಿಗೆ ತ್ರಿಶ್ಶೂರ್ ಜಿಲ್ಲೆಯಿಂದ ಸೋಂಕು ತಗಲಿಲ್ಲ ಎಂದು ಹೇಳಲಾಗುತ್ತಿದೆ.ಇಡುಕ್ಕಿಯ ತೊಡುಪುಳದಿಂದ ಬರುವಾಗ ವಿದ್ಯಾರ್ಥಿಯಲ್ಲಿ ರೋಗ ಲಕ್ಷಣಗಳು ಕಂಡುಬಂದಿತ್ತು.ತ್ರಿಶ್ಶೂರಿನಲ್ಲಿ ಈ ರೋಗಿಯೊಂದಿಗೆ ಒಡನಾಟ ಹೊಂದಿದ್ದ 34 ಮಂದಿಯ ಆರೋಗ್ಯ ಸ್ಥಿತಿ ಮೇಲೆ ನಿಗಾ ಇರಿಸಲಾಗಿದೆ ಎಂದು ತ್ರಿಶ್ಶೂರ್ ವೈದ್ಯಾಧಿಕಾರಿ ಹೇಳಿದ್ದಾರೆ.ತೊಡುಪುಳದಲ್ಲಿಯೂ ವಿದ್ಯಾರ್ಥಿಯೊಂದಿಗೆ ಒಡನಾಡಿದ 16 ಮಂದಿಯ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಲಾಗಿದೆ.

ಆದಾಗ್ಯೂ, ಕಳೆದ ತಿಂಗಳು 24ರಿಂದ ಜೂನ್ 3ನೇ ತಾರೀಖಿನವರೆಗ ವಿದ್ಯಾರ್ಥಿಯೊಂದಿಗೆ ಒಡನಾಡಿದ ಯಾವುದೇ ವ್ಯಕ್ತಿಗಳಲ್ಲಿರೋಗ ಲಕ್ಷಣಗಳುಕಂಡು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.ಎರ್ನಾಕುಳಂ ಮೆಡಿಕಲ್ ಕಾಲೇಜಿನಲ್ಲಿ 24x7 ಸಹಾಯವಾಣಿ ಆರಂಭಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.