ADVERTISEMENT

ಐಎಸ್‌ಐ ನಂಟಿನ ಶಂಕೆ: ಉತ್ತರಪ್ರದೇಶ ಉದ್ಯಮಿ ಸೆರೆ

ಪಿಟಿಐ
Published 19 ಮೇ 2025, 13:07 IST
Last Updated 19 ಮೇ 2025, 13:07 IST
   

ಲಖನೌ: ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಕೆಲಸ ಮಾಡುತ್ತಿರುವ ಶಂಕೆ ಮೇಲೆ ರಾಮಪುರ ಮೂಲದ ಉದ್ಯಮಿ ಶೆಹಜಾದ್ ಎಂಬುವರನ್ನು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ಪಡೆ (ಎಟಿಎಸ್‌) ಬಂಧಿಸಿದೆ. 

ಭಾರತದ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಜತೆ ಹಂಚಿಕೊಂಡ ಶಂಕೆ ಮೇಲೆ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಬಂಧಿಸಿದ ಬೆನ್ನಲ್ಲೇ ಉದ್ಯಮಿಯ ಬಂಧನವಾಗಿದೆ.

ರಾಮಪುರ ಜಿಲ್ಲೆ ಟಾಂಡಾ ನಿವಾಸಿ ಶೆಹಜಾದ್‌ ಅವರನ್ನು ಮೊರಾದಾಬಾದ್‌ನಲ್ಲಿ ಭಾನುವಾರ ಬಂಧಿಸಿದ್ದು, ಇವರು ಹಲವು ಬಾರಿ ಪಾಕಿಸ್ತಾನಕ್ಕೆ ಪ್ರಯಾಣ ಮಾಡಿದ್ದರು. ಐಎಸ್‌ಐನ ಹಲವರನ್ನು ಭೇಟಿ ಮಾಡಿ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಮಧ್ಯವರ್ತಿಗಳ ಮೂಲಕ ಐಎಸ್‌ಐ ಏಜೆಂಟ್‌ಗಳಿಗೆ(ಪ್ರತಿನಿಧಿ) ಹಣಕಾಸು ನೆರವು ಒದಗಿಸಿದ್ದರು ಎಂದು ಎಟಿಎಸ್‌ ಮೂಲಗಳು ತಿಳಿಸಿವೆ.

ADVERTISEMENT

ಸೌಂದರ್ಯ ವರ್ಧಕಗಳು, ಬಟ್ಟೆಗಳು, ಸಾಂಬಾರ್‌ ಪದಾರ್ಥಗಳು ಮತ್ತು ಇತರೆ ವಸ್ತುಗಳನ್ನು ಅಪಹರಿಸುತ್ತಿದ್ದ ಶೆಹಜಾದ್, ಅವುಗಳನ್ನು ಅಕ್ರಮವಾಗಿ ಗಡಿ ದಾಟಿಸುತ್ತಿದ್ದರು. ಐಎಸ್‌ಐ ಮಧ್ಯವರ್ತಿಗಳ ಜತೆ ಸಂಪರ್ಕ ಸಾಧಿಸಿ ಭಾರತದ ಸಿಮ್‌ ಕಾರ್ಡ್‌ಗಳು ಏಜೆಂಟರಿಗೆ ಸಿಗುವಂತೆ ಮಾಡಿದ್ದರು ಎಂದು ಎಟಿಎಸ್‌ ತಿಳಿಸಿದೆ.

ರಾಮಪುರ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದ ಹಲವು ವ್ಯಕ್ತಿಗಳನ್ನು ಈ ಹಿಂದೆ ಪಾಕಿಸ್ತಾನಕ್ಕೆ ಶೆಹಜಾದ್ ಕಳಿಸಿದ್ದರು. ಐಎಸ್‌ಐ ಇವರಿಗೆಲ್ಲಾ ವೀಸಾ ಒದಗಿಸುತ್ತಿತ್ತು. ಬಂಧಿತ ಶೆಹಜಾದ್‌ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲು ಎಟಿಎಸ್‌ ಮುಂದಾಗಿದೆ.

ಈ ಮಧ್ಯೆ ಶೆಹಜಾದ್ ಭಾರತದ ಸರಕುಗಳನ್ನು ಪಾಕಿಸ್ತಾನಕ್ಕೆ ತಗೆದುಕೊಂಡು ಹೋಗುತ್ತಿದ್ದರು. ಅಲ್ಲಿಂದ ಭಾರತಕ್ಕೆ ತರುತ್ತಿದ್ದರು ಅಷ್ಟೇ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಕೆಲವು ದಿನಗಳಿಂದ ದೇಶದ ವಿವಿಧೆಡೆ ಐಎಸ್‌ಐಗೆ ಬೇಹುಗಾರಿಕೆ ನಡೆಸುತ್ತಿರುವ ಶಂಕೆ ಮೇಲೆ ಹಲವರನ್ನು ಬಂಧಿಸಲಾಗುತ್ತಿದೆ. ಪ್ರವಾಸಿ ಬ್ಲಾಗರ್‌ ಹಾಗೂ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಬಂಧನ ನಂತರ ಈ ಶೋಧ ಮತ್ತಷ್ಟು ಚುರುಕು ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.