ADVERTISEMENT

ಗುಜ್ಜಾರ್‌ ಸಮುದಾಯಕ್ಕೆ ಶೇ5 ರಷ್ಟು ಮೀಸಲಾತಿ: ಮಸೂದೆ ಅಂಗೀಕಾರ

ಪಿಟಿಐ
Published 13 ಫೆಬ್ರುವರಿ 2019, 20:30 IST
Last Updated 13 ಫೆಬ್ರುವರಿ 2019, 20:30 IST
   

ಜೈಪುರ: ಗುಜ್ಜಾರ್‌ ಮತ್ತು ಇತರ ನಾಲ್ಕು ಸಮುದಾಯದವರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ5 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ರಾಜಸ್ಥಾನ ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಗಿದೆ.

ರಾಜಸ್ಥಾನದ ಹಿಂದುಳಿದ ವರ್ಗಗಳ ತಿದ್ದುಪಡಿ ಮಸೂದೆಯನ್ನು (ರಾಜ್ಯ ಸರ್ಕಾರದ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ) ಇಂಧನ ಸಚಿವ ಬಿ.ಡಿ. ಕಲ್ಲಾ ಅವರು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಗುಜ್ಜಾರ್‌ ಸಮುದಾಯದವರು ಕಳೆದ ಶುಕ್ರವಾರದಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದರು. ದೆಹಲಿ–ಮುಂಬೈ ಮಾರ್ಗದ ರೈಲು ಹಳಿಗಳಲ್ಲಿ ಹಾಗೂ ಹಲವು ಹೆದ್ದಾರಿಗಳಲ್ಲಿ ಧರಣಿ ಕುಳಿತಿದ್ದರು.

ADVERTISEMENT

ಹಿಂದುಳಿದ ವರ್ಗಗಗಳಿಗೆ ಈಗಾಗಲೇ ನೀಡಿರುವ ಶೇ21ರಷ್ಟು ಮೀಸಲಾತಿಯನ್ನು ಶೇ26ಕ್ಕೆ ಏರಿಸಲು ಮಸೂದೆಯಲ್ಲಿ ಆಗ್ರಹಿಸಲಾಗಿದೆ. ಜೊತೆಗೆ ಗುಜ್ಜಾರ್‌, ಬಂಜಾರ, ಗಾಡಿಯಾ ಲುಹಾರ್‌, ರೈಕಾ ಮತ್ತು ಗಡಾರಿಯಾ ಸಮುದಾಯದವರಿಗೆ ಪ್ರತ್ಯೇಕವಾಗಿ ಶೇ 5ರಷ್ಟು ಮೀಸಲಾತಿ ನೀಡಬೇಕು ಎಂದೂ ಹೇಳಲಾಗಿದೆ.

ಈ ಐದು ಸಮುದಾಯಗಳು ತುಂಬಾ ಹಿಂದುಳಿದಿರುವುದರಿಂದ ಪ್ರತ್ಯೇಕವಾಗಿ ಶೇ5ರಷ್ಟು ಮೀಸಲಾತಿ ನೀಡುವ ಅಗತ್ಯ ಇದೆ ಎಂದೂ ಮಸೂದೆಯಲ್ಲಿ ಕಾರಣ ನೀಡಲಾಗಿದೆ.

ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸ್ಪಷ್ಟವಾದ ಪ್ರಸ್ತಾವನೆ ಸಲ್ಲಿಸಬೇಕು ಎಂದು ಗುಜ್ಜಾರ್‌ ನಾಯಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.