ADVERTISEMENT

ತಾಜ್‌ ಮಹಲ್‌ ಕೊಠಡಿ ತೆರವು: ಇದು ಇತಿಹಾಸಕಾರರಿಗೆ ಬಿಟ್ಟ ವಿಚಾರ ಎಂದ ಹೈಕೋರ್ಟ್

ಪಿಟಿಐ
Published 13 ಮೇ 2022, 5:36 IST
Last Updated 13 ಮೇ 2022, 5:36 IST
ತಾಜ್‌ ಮಹಲ್‌
ತಾಜ್‌ ಮಹಲ್‌   

ಲಖನೌ:ತಾಜ್‌ಮಹಲ್‌ನ ‘ಇತಿಹಾಸ’ವನ್ನು ತಿಳಿಯಲು ಸತ್ಯಶೋಧನಾ ತನಿಖೆ ನಡೆಸಲುಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಗೆ ಆದೇಶಿಸಬೇಕು ಎಂದು ಕೋರಿ ಬಿಜೆಪಿ ಮುಖಂಡರೊಬ್ಬರು ಸಲ್ಲಿಸಿದ್ದಅರ್ಜಿಯನ್ನುಅಲಹಾಬಾದ್ ಹೈಕೋರ್ಟ್‌ ಗುರುವಾರ ತಿರಸ್ಕರಿಸಿದೆ.

ತಾಜ್‌ ಮಹಲ್‌ನ ಇತಿಹಾಸ ತಿಳಿಯಲು ಈ ಸ್ಮಾರಕದೊಳಗೆ ಕಾಯಂ ಬಾಗಿಲು ಮುಚ್ಚಿರುವ 22 ಕೊಠಡಿಗಳ ಬೀಗಮುದ್ರೆಯನ್ನು ತೆರವುಗೊಳಿಸಬೇಕು,ಸತ್ಯಶೋಧನಾ ತನಿಖೆಗೆ ಆದೇಶಿಸಬೇಕು ಎಂದು ಅರ್ಜಿದಾರರಾದಬಿಜೆಪಿಯ ಅಯೋಧ್ಯಾ ಘಟಕದ ಮಾಧ್ಯಮ ಉಸ್ತುವಾರಿ ಮತ್ತು ವಕೀಲ ರಜನೀಶ್ ಸಿಂಗ್‌ ಅವರು ಹೈಕೋರ್ಟ್‌ನ ಲಖನೌ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಡಿ.ಕೆ. ಉಪಾಧ್ಯಾಯ, ಸುಭಾಷ್‌ ವಿದ್ಯಾರ್ಥಿ ಅವರಿದ್ದ ಪೀಠವು, ಇದರಲ್ಲಿ ಕಾನೂನು ಅಥವಾ ಸಾಂವಿಧಾನಿಕ ಹಕ್ಕುಗಳು ಉಲ್ಲಂಘನೆಯಾಗಿದೆ ಎನ್ನುವುದನ್ನು ಸಾಬೀತುಪಡಿಸಲು ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿತು.

ADVERTISEMENT

‘ಸತ್ಯ, ಅದು ಏನೇ ಇರಲಿ. ಈ ಸ್ಮಾರಕದ ಇತಿಹಾಸದ ಸತ್ಯಶೋಧನೆಯನ್ನು ಇತಿಹಾಸಕಾರರ ತೀರ್ಮಾನಕ್ಕೆ ಬಿಡುವುದು ಸೂಕ್ತ’ ಎಂದು ಪೀಠ ಹೇಳಿದೆ.

ಅರ್ಜಿದಾರರ ವಕೀಲ ರುದ್ರ ವಿಕ್ರಮ್ ಸಿಂಗ್ ಅವರು ಅರ್ಜಿ ಹಿಂಪಡೆಯಲು ಮತ್ತು ಹೊಸದಾಗಿ ಅರ್ಜಿ ಸಲ್ಲಿಸಲು ಅನುಮತಿ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು. ಆದರೆ, ಪೀಠವು ಅವರ ಮನವಿ ಪುರಸ್ಕರಿಸಲಿಲ್ಲ. ಅರ್ಜಿಯನ್ನು ವಜಾಗೊಳಿಸಿತು.

ಮೊಘಲ್‌ ಚಕ್ರವರ್ತಿಗಳ ಆಡಳಿತಾವಧಿಯಲ್ಲಿ ನಿರ್ಮಿಸಲಾಗಿರುವ ತಾಜ್ ಮಹಲ್‌ನ ಸ್ಥಳದಲ್ಲಿ ಅದಕ್ಕೂ ಹಿಂದೆ ಶಿವನ ದೇವಸ್ಥಾನ ಇತ್ತು ಎಂದು ಹಿಂದೂ ಸಂಘಟನೆಗಳು ಪ್ರತಿಪಾದಿಸಿವೆ. ಸದ್ಯ, ಈ ಸ್ಮಾರಕವನ್ನು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಸಂರಕ್ಷಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.