ADVERTISEMENT

ಜಪ್ತಿಯಾಗಿರುವ ಲಂಚದ ಹಣ ಜನರಿಗೆ ಮರಳಿಸಲು ಚಿಂತನೆ: ಪ್ರಧಾನಿ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 6 ಮೇ 2024, 16:10 IST
Last Updated 6 ಮೇ 2024, 16:10 IST
   

ರಾಜಾಮಹೇಂದ್ರವರಂ: ಭ್ರಷ್ಟಾಚಾರ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಹಣವನ್ನು ಜನರಿಗೆ ಮರಳಿಸುವ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆಯಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಆಂಧ್ರಪ್ರದೇಶದ ವೇಮಗಿರಿಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಜಾರಿ ನಿರ್ದೇಶನಾಲಯದ ದಾಳಿಯ ವೇಳೆ ಜಾರ್ಖಂಡ್‌ ಸಚಿವರೊಬ್ಬರ ಕಾರ್ಯದರ್ಶಿಯ ಮನೆಯಲ್ಲಿ ಬೃಹತ್‌ ಪ್ರಮಾಣದಲ್ಲಿ ಹಣ ಪತ್ತೆಯಾಗಿರುವ ಬಗ್ಗೆ ಕಿಡಿಕಾರಿದರು.

‘ಇಂತಹ ವ್ಯಕ್ತಿಗಳು ಕಾಂಗ್ರೆಸ್‌ ಪರಿವಾರಕ್ಕೆ ಆಪ್ತರಾಗಿರುತ್ತಾರೆ. ಕಾಂಗ್ರೆಸ್‌ನವರು ತಮ್ಮ ಪಕ್ಷದ ಕಾರ್ಯಕರ್ತರ ಮನೆಯನ್ನು ಭ್ರಷ್ಟಾಚಾರದ ಗೋದಾಮು ಮಾಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಜಪ್ತಿ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ’ ಎಂದು ಟೀಕಿಸಿದರು

ADVERTISEMENT

‘ಹಣ ಕೊಳ್ಳೆ ಹೊಡೆಯುವವರೆಲ್ಲ ಏಕೆ ಕಾಂಗ್ರೆಸ್‌ನ ಮೊದಲ ಪರಿವಾರಕ್ಕೆ ಆಪ್ತರಾಗಿರುತ್ತಾರೆ? ಕಾಂಗ್ರೆಸ್‌ನ ಮೊದಲ ಪರಿವಾರ ಕಪ್ಪುಹಣದ ಗೋದಾಮನ್ನು ನಿರ್ಮಿಸಿದೆಯೇ? ದೇಶ ಇದನ್ನು ತಿಳಿಯಲು ಬಯಸುತ್ತಿದೆ’ ಎಂದು ಹೇಳಿದರು.

‘ಇ.ಡಿ ₹1.25 ಲಕ್ಷ ಕೋಟಿ ಆಸ್ತಿಯನ್ನು ಈವರೆಗೆ ಜಪ್ತಿ ಮಾಡಿದೆ. ಇತರ ತನಿಖಾ ಸಂಸ್ಥೆಗಳು ಜಪ್ತಿ  ಮಾಡಿರುವುದನ್ನು ಸೇರಿಸಿದರೆ ಈ ಮೊತ್ತ ಹೆಚ್ಚಾಗುತ್ತದೆ. ಈಗಾಗಲೇ ₹17000 ಕೋಟಿ ಹಣವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಬಡಜನರ ಹಕ್ಕುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದು ಮೋದಿ ಗ್ಯಾರಂಟಿ’  ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.