ADVERTISEMENT

ಬಿಜೆಪಿ ನಾಯಕನಿಂದ ತಮಿಳುನಾಡು ಪೊಲೀಸ್, ಹೈಕೋರ್ಟ್‌ ನಿಂದನೆ: ಪ್ರಕರಣ ದಾಖಲು

ಎಚ್‌.ರಾಜಾ ಮತ್ತು ಇತರ ಏಳು ಮಂದಿ ವಿರುದ್ಧ ಎಫ್‌ಐಆರ್‌

ಏಜೆನ್ಸೀಸ್
Published 17 ಸೆಪ್ಟೆಂಬರ್ 2018, 4:04 IST
Last Updated 17 ಸೆಪ್ಟೆಂಬರ್ 2018, 4:04 IST
   

ಚೆನ್ನೈ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್‌.ರಾಜಾ ತಮಿಳುನಾಡು ಪೊಲೀಸರು ಮತ್ತು ಮದ್ರಾಸ್ ಹೈಕೋರ್ಟ್‌ ಅನ್ನು ನಿಂದಿಸುತ್ತಿರುವ ವಿಡಿಯೊ ವೈರಲ್ ಆಗಿದೆ.

ಪ್ರಕರಣಕ್ಕೆ ಸಂಬಂಧಿಸಿ ರಾಜಾ ಮತ್ತು ಇತರ ಏಳು ಮಂದಿಯ ವಿರುದ್ಧ ಪುದುಕೊಟ್ಟೈ ಜಿಲ್ಲೆಯ ತಿರುಮಯಂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ನಡೆದಿದ್ದೇನು?: ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ಗಣೇಶ ವಿಗ್ರಹ ವಿಸರ್ಜನೆಗೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಘಟನೆ ನಡೆದಿದೆ. ಕೋಮುಸೂಕ್ಷ್ಮ ಪ್ರದೇಶವೊಂದರಲ್ಲಿ ಮೆರವಣಿಗೆ ನಡೆಸಲು ರಾಜಾ ಮತ್ತು ಅವರ ಬೆಂಬಲಿಗರು ಮುಂದಾಗಿದ್ದಾರೆ. ಆದರೆ, ಪೊಲೀಸರು ಅವರಿಗೆ ಅನುಮತಿ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ರಾಜಾ, ಪೊಲೀಸರನ್ನು ಭ್ರಷ್ಟರೆಂದು ಆರೋಪಿಸಿದ್ದಾರೆ. ಜತೆಗೆ, ಮದ್ರಾಸ್ ಹೈಕೋರ್ಟ್‌ ವಿರುದ್ಧವೂ ಹರಿಹಾಯ್ದಿದ್ದಾರೆ.

‘ತಮಿಳುನಾಡು ಪೊಲೀಸರು ಕ್ರೈಸ್ತ ಮಿಷನರಿಗಳಿಂದ ಲಂಚ ಪಡೆಯುತ್ತಿದ್ದಾರೆ. ಡಿಜಿಪಿ ಟಿ.ಕೆ.ರಾಜೇಂದ್ರನ್‌ ಮನೆ ಮೇಲೆ ಸಿಬಿಐ ದಾಳಿ ಮಾಡಿದ್ದರಿಂದ ಇವರಿಗೆ ನಾಚಿಕೆಯಾಗಿಲ್ಲವೇ’ ಎಂದೂ ರಾಜಾ ಹೇಳಿರುವುದು ವಿಡಿಯೊದಲ್ಲಿದೆ.

‘ನಾವು ಮದ್ರಾಸ್ ಹೈಕೋರ್ಟ್ ಆದೇಶ ಪಾಲಿಸುತ್ತಿದ್ದೇವಷ್ಟೇ’ ಎಂದು ಪೊಲೀಸರು ಹೇಳಿದಾಗ ಮದ್ರಾಸ್‌ ಹೈಕೋರ್ಟ್‌ ಬಗ್ಗೆಯೂ ರಾಜಾ ಸಾರ್ವಜನಿಕವಾಗಿ ನಿಂದನೆಯ ಮಾತುಗಳನ್ನಾಡಿದ್ದಾರೆ. ತಮಗೆ ಮಾತನಾಡಲು ವೇದಿಕೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಡಿಯೊ ಶನಿವಾರ ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿ ರಾಜಾ ಹಾಗೂ ಇತರ ಏಳು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಧ್ವನಿ ತಮ್ಮದಲ್ಲ ಎಂದ ರಾಜಾ: ವಿಡಿಯೊದಲ್ಲಿರುವ ಧ್ವನಿ ನನ್ನದಲ್ಲ. ಬೇರೆಯವರ ಧ್ವನಿಯನ್ನು ವಿಡಿಯೊಕ್ಕೆ ಡಬ್‌ ಮಾಡಲಾಗಿದೆ. ತಮಿಳುನಾಡು ಪೊಲೀಸರು ಮತ್ತು ಮದ್ರಾಸ್ ಹೈಕೋರ್ಟ್‌ ಮೇಲೆ ಅಪಾರ ಗೌರರವಿವೆ ಎಂದು ರಾಜಾ ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.